w
Headlines
Home » ಗ್ಯಾರಂಟಿ ಯೋಜನೆಗಳಿಂದ ಬಡಕುಟುಂಬಗಳ ಜೀವನದಲ್ಲಿ ಸ್ಥಿರತೆ – ಶಾಸಕ ಗೋಪಾಲಕೃಷ್ಣ ಬೇಳೂರು

ಗ್ಯಾರಂಟಿ ಯೋಜನೆಗಳಿಂದ ಬಡಕುಟುಂಬಗಳ ಜೀವನದಲ್ಲಿ ಸ್ಥಿರತೆ – ಶಾಸಕ ಗೋಪಾಲಕೃಷ್ಣ ಬೇಳೂರು

GridArt 20260213

MLA Gopalakrishna Beluru inaugurated the bhoomi pooja for a ₹1.20 crore road asphalting project in Kenchanala near Ripponpete, highlighting Karnataka government guarantee schemes and rural development initiatives.

ಗ್ಯಾರಂಟಿ ಯೋಜನೆಗಳಿಂದ ಬಡಕುಟುಂಬಗಳ ಜೀವನದಲ್ಲಿ ಸ್ಥಿರತೆ – ಶಾಸಕ ಗೋಪಾಲಕೃಷ್ಣ ಬೇಳೂರು

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡ ಹಾಗೂ ಹಿಂದುಳಿದ ವರ್ಗಗಳ ಜೀವನದಲ್ಲಿ ಆರ್ಥಿಕ ಸ್ಥಿರತೆ ತಂದುಕೊಟ್ಟಿದ್ದು, ಸಾಮಾನ್ಯ ವರ್ಗ ಗಟ್ಟಿಯಾಗಿ ನಿಲ್ಲುವಂತೆ ಮಾಡುವಲ್ಲಿ ಸರ್ಕಾರದ ಯೋಜನೆಗಳು ಆಧಾರ ಸ್ತಂಭವಾಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಸಮೀಪದ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಚನಾಲ ಗ್ರಾಮದಲ್ಲಿ ಸುಮಾರು 1.20 ಕೋಟಿ ರೂ. ಅಂದಾಜು ವೆಚ್ಚದ, 2.00 ಕಿ.ಮೀ ಉದ್ದದ ಸಿದ್ದಪ್ಪನಗುಡಿಯಿಂದ ಆಚಾಪುರ ಜಿಲ್ಲಾ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಉತ್ತಮ ಸಂಪರ್ಕ ರಸ್ತೆ ಅವಶ್ಯಕವಾಗಿದ್ದು, ಕೆಂಚನಾಲ ಒಂದೇ ಅಲ್ಲದೆ ತಮ್ಮ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪರ್ಕ ರಸ್ತೆಗಳಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಹಂತ ಹಂತವಾಗಿ ಸುಸಜ್ಜಿತ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರ ಸಾಹರ ಕ್ಷೇತ್ರದಲ್ಲಿ 232 ಕಾಲಸಂಕಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿ ವಿಶೇಷ ಆದ್ಯತೆ ನೀಡಿದೆ. ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಲಸಂಕ ನಿರ್ಮಾಣಕ್ಕೆ ಅನುದಾನ ತರಲು ಸಾಧ್ಯವಾಗಿರಲಿಲ್ಲ , ಗ್ರಾಮೀಣ ಜನರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯ ಹೆಚ್ಚಿಸುವ ಉದ್ದೇಶದಿಂದ ಶಕ್ತಿ ಯೋಜನೆಯಡಿ ಎರಡು–ಮೂರು ಬಸ್ ಸೇವೆ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಪ್ರತಿಯೊಂದು ಬಡಕುಟುಂಬಕ್ಕೂ ಆರ್ಥಿಕ ಭದ್ರತೆ ಸಿಕ್ಕಿದ್ದು, ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಪೂರೈಸುವಲ್ಲಿ ಈ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸರ್ಕಾರ ವರ್ಷಕ್ಕೆ ಸುಮಾರು 54 ಸಾವಿರ ಕೋಟಿ ರೂ. ವೆಚ್ಚ ಮಾಡಿ ಈ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ಹೇಳಿದರು.

ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 8 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದ ಅವರು, ವರ್ಷಕ್ಕೆ ಎರಡು ಬಾರಿ ನಡೆಯುವ ಕೆಂಚನಾಲ ಮಾರಿಕಾಂಬ ದೇವಸ್ಥಾನದ ಬಳಿ ಸಭಾಭವನ ನಿರ್ಮಾಣ, ಮಹಾದ್ವಾರ ನಿರ್ಮಾಣ ಹಾಗೂ ಚರಂಡಿ–ಸರ್ಕಲ್ ಅಗಲೀಕರಣ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕರಿಸಿ ತಮ್ಮ ಮನೆಯ ಮುಂಭಾಗದ ಜಾಗ ತೆರವುಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಉಬೇದುಲ್ಲಾ ಷರೀಫ್ ಮಾತನಾಡಿ, ಕೆಂಚನಾಲ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಬಹುಕಾಲದಿಂದ ಸಂಪರ್ಕ ರಸ್ತೆ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಂದಿನ ಗುದ್ದಲಿಪೂಜೆಯೊಂದಿಗೆ ಆ ಕನಸು ನನಸಾಗುತ್ತಿದೆ ಎಂದು ಹೇಳಿದರು. ಈ ರಸ್ತೆ ನಿರ್ಮಾಣದಿಂದ ಗ್ರಾಮೀಣ ಜನರ ದೈನಂದಿನ ಸಂಚಾರ ಸುಗಮವಾಗುವುದರ ಜೊತೆಗೆ ಕೃಷಿ ಉತ್ಪನ್ನಗಳ ಸಾಗಣೆ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೂ ಸಹಕಾರಿಯಾಗಲಿದೆ ಎಂದರು. ಸರ್ಕಾರ ಹಾಗೂ ಶಾಸಕರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮೂಲಸೌಕರ್ಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಶ್ರಮಿಸಬೇಕೆಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೆಂಚನಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಪರಮೇಶ, ರಮ್ಯ, ಗೌರಮ್ಮ, ಪುಟ್ಟಮ್ಮ, ಉಷಾ, ಮಂಜುನಾಥ, ಕೃಷ್ಣೋಜಿರಾವ್, ಲೋಕೋಪಯೋಗಿ ಇಲಾಖೆಯ ಎಇಇ ಸಂತೋಷ, ಜೆಇ ಸಿಂಧು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.

ಮಂಜುನಾಥ್ ಮಾದಾಪುರ ಸ್ವಾಗತಿಸಿ ನಿರೂಪಿಸಿದರು. ಕೃಷ್ಣೋಜಿರಾವ್ ವಂದಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.