ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ರಿಪ್ಪನ್ಪೇಟೆಯಲ್ಲಿ ಕನ್ನಡ ಧ್ವಜದಕಟ್ಟೆ ಧ್ವಂಸ – ಭುಗಿಲೆದ್ದ ಕನ್ನಡಿಗರ ಆಕ್ರೋಶ! | Kannada flag platform demolished near Government Model Higher Primary School in Ripponpete, triggering protests and anger among Kannada activists.
ರಿಪ್ಪನ್ಪೇಟೆ : ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿರುವ ನವೆಂಬರ್ ತಿಂಗಳಿನಲ್ಲಿಯೇ, ಕನ್ನಡದ ಅಸ್ಮಿತೆಯ ಪ್ರತೀಕವಾದ ಕನ್ನಡ ಧ್ವಜದಕಟ್ಟೆಯನ್ನು ಏಕಾಏಕಿ ಧ್ವಂಸಗೊಳಿಸಿರುವ ಅಕ್ಷಮ್ಯ ಘಟನೆ ಪಟ್ಟಣದಲ್ಲಿ ನಡೆದಿದ್ದು, ಕನ್ನಡ ಅಭಿಮಾನಿಗಳು ಹಾಗೂ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಿದೆ.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿದ್ದ ಕನ್ನಡ ಧ್ವಜದಕಟ್ಟೆಯನ್ನು ಗುತ್ತಿಗೆದಾರರು ನೆಲಸಮಗೊಳಿಸಿದ್ದಾರೆ. ಮೂಲಗಳ ಪ್ರಕಾರ, ಶಾಲಾ ಆವರಣದಲ್ಲಿ ನೀರಿನ ಟ್ಯಾಂಕ್ ನಿರ್ಮಿಸುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಾಗಲಿ ಅಥವಾ ಸ್ಥಳೀಯ ಕನ್ನಡ ಪರ ಸಂಘಟನೆಗಳಿಗಾಗಲಿ ಕನಿಷ್ಠ ಮಾಹಿತಿಯನ್ನೂ ನೀಡದೆ ಏಕಾಏಕಿ ಧ್ವಜಕಟ್ಟೆಯನ್ನು ಒಡೆದು ಹಾಕಿರುವುದು ಕನ್ನಡಾಭಿಮಾನಿಗಳ ಕಣ್ಣು ಕೆಂಪಾಗಿಸಿದೆ.
ಮೈದಾನ ಕಬಳಿಕೆಗೂ ಸಾರ್ವಜನಿಕರ ವಿರೋಧ:
ಪ್ರಸಕ್ತ ವರ್ಷ ಶತಮಾನೋತ್ಸವದ ಸಂಭ್ರಮ ಆಚರಿಸಿಕೊಳ್ಲೂತ್ತಿರುವ ಈ ಸರ್ಕಾರಿ ಶಾಲೆಯಲ್ಲಿ, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಈಗಾಗಲೇ ಮೈದಾನದ ತೀವ್ರ ಕೊರತೆಯಿದೆ. ಇರುವ ಅಲ್ಪಸ್ವಲ್ಪ ಜಾಗವನ್ನೂ ಉಳಿಸಿಕೊಳ್ಳುವ ಬದಲು, ಅದೇ ಮೈದಾನದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿರುವುದು ಪೋಷಕರು ಮತ್ತು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡ ಧ್ವಜಕಟ್ಟೆಯನ್ನು ಧ್ವಂಸಗೊಳಿಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ದೇವರಾಜ್ ಕೆರೆಹಳ್ಳಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೊಸನಗರ ತಾಲೂಕು ನಿಕಟಪೂರ್ವ ಅಧ್ಯಕ್ಷ ತ ಮ ನರಸಿಂಹ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿತನದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಕನ್ನಡದ ಹಬ್ಬವನ್ನು ಆಚರಿಸುವ ಪವಿತ್ರ ನವೆಂಬರ್ ತಿಂಗಳಿನಲ್ಲಿಯೇ ತಾಯಿ ಭುವನೇಶ್ವರಿಯ ಧ್ವಜಕಟ್ಟೆಗೆ ಇಂತಹ ಘೋರ ಅವಮಾನ ಮಾಡಿರುವುದು ಅಪ್ಪಟ ಕನ್ನಡಿಗರ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟಾಗಿದೆ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಅನುಮತಿ ಇಲ್ಲದೆ ಧ್ವಜಕಟ್ಟೆ ನೆಲಸಮಗೊಳಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅದೇ ಸ್ಥಳದಲ್ಲಿ ಗೌರವಯುತವಾಗಿ ಧ್ವಜಕಟ್ಟೆಯನ್ನು ಮರುನಿರ್ಮಾಣ ಮಾಡಿಕೊಡಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.
