ಭೀಕರ ಅಗ್ನಿ ಅವಘಡ: ಕುರಿ ಶೆಡ್ಗೆ ಬೆಂಕಿ, 150 ಕುರಿ ಸೇರಿದಂತೆ 250ಕ್ಕೂ ಹೆಚ್ಚು ಕುರಿ-ಕೋಳಿಗಳು ಸಜೀವ ದಹನ! | Over 150 sheep and 100 chickens were killed in a fire at a sheep shed in Sooranagi village, Soraba taluk, reportedly caused by an electrical short circuit.
ಸೊರಬ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕುರಿ ಶೆಡ್ಗೆ ಬೆಂಕಿ ತಗುಲಿ, 150 ಕುರಿಗಳು ಹಾಗೂ 100ಕ್ಕೂ ಹೆಚ್ಚು ಕೋಳಿಗಳು ಸಜೀವ ದಹನಗೊಂಡಿರುವ ಘಟನೆ ಸೊರಬ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಗ್ರಾಮದ ರಾಮಣ್ಣ ಎಂಬುವರಿಗೆ ಸೇರಿದ ಕುರಿ ಶೆಡ್ನಲ್ಲಿ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಈ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಶೆಡ್ಗೆ ವ್ಯಾಪಿಸಿದೆ ಎನ್ನಲಾಗಿದೆ.
ಶೆಡ್ನಲ್ಲಿದ್ದ ಕುರಿಗಳ ಕಿರುಚಾಟ ಕೇಳಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬೆಂಕಿ ಇಡೀ ಶೆಡ್ಗೆ ವ್ಯಾಪಿಸಿ ಸಂಪೂರ್ಣ ಸುಟ್ಟು ಹೋಗಿತ್ತು. ಪರಿಣಾಮ ಶೆಡ್ನಲ್ಲಿದ್ದ ಸುಮಾರು 150 ಕುರಿಗಳು ಹಾಗೂ 100ಕ್ಕೂ ಹೆಚ್ಚು ಕೋಳಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿವೆ.
ಈ ದುರ್ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದ್ದು, ಕುರಿ ಸಾಕಾಣಿಕೆಯನ್ನೇ ನಂಬಿಕೊಂಡಿದ್ದ ರಾಮಣ್ಣ ಅವರಿಗೆ ಭಾರೀ ಆರ್ಥಿಕ ಸಂಕಷ್ಟ ಎದುರಾಗಿದೆ.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
