Headlines

ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು

ವಿಶ್ವಕಪ್ ವಿಜೇತ ಕಾವ್ಯಾಳಿಗೆ ಬೇಕಿಲ್ಲ ಹಾರ ತುರಾಯಿ – ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು

ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಎಂಬ ಹೆಸರಿದೆ—ಆದರೆ ಆ ಹೆಸರಿನ ಹಿಂದೆ ಅಡಗಿರುವ ಬದುಕಿನ ನೋವು, ಹೋರಾಟ, ಕನಸುಗಳ ಕಥೆ ಯಾರಿಗೂ ಕಾಣುವುದಿಲ್ಲ. ದೇಶಕ್ಕೆ ವಿಶ್ವಕಪ್‌ ಗೆಲುವು ತಂದುಕೊಟ್ಟ ಈ ಯುವತಿಯ ಕಣ್ಣುಗಳಲ್ಲಿ ಇಂದಿಗೂ “ಮನೆ ಹಾಗೂ ಜೀವನ ಹೇಗೆ ಕಟ್ಟಿಕೊಳ್ಳಬಹುದು?” ಎಂಬ ಹಂಬಲ ಮಾತ್ರ ಕಾಯುತ್ತಿದೆ ಎನ್ನುವುದು ಹೃದಯ ಕಲುಕಿಸುವ ಸತ್ಯ.

ಕರ್ನಾಟಕದಿಂದ ಆಯ್ಕೆಯಾದ ಮೂವರು ಆಟಗಾರ್ತಿಯರಲ್ಲಿ ಒಬ್ಬರಾದ ಕಾವ್ಯಾ, ತಂಡದ ಆಲ್–ರೌಂಡರ್ ಆಗಿ ನಿರಂತರ ಶ್ರಮಿಸಿ, ದೇಶದ ಗೌರವಕ್ಕೆ ಬಲ ನೀಡಿದಳು. ಕ್ರೀಡಾಂಗಣದಲ್ಲಿ ಆಕೆಯ ಒಳಗಿನ ಶಕ್ತಿ ಯಾರಿಗೂ ಕಾಣದರೂ, ಮನೆಯಲ್ಲಿ ಅವಳ ಎದುರು ಬರುವ ಹೋರಾಟಗಳನ್ನು ಹೊರಜಗತ್ತು ಅರಿಯುವುದೇ ಇಲ್ಲ. ವೇದಿಕೆಗೇರಿಸಿ ಸನ್ಮಾನಿಸುವ ಸಾವಿರ ಕೈಗಳು ಸಿಕ್ಕರೂ, ಬದುಕಿಗೆ ಬೇಕಿರುವ ಕೈಹಿಡಿತ ಕಾವ್ಯಾಳಿಗೆ ಇನ್ನೂ ಯಾರಿಂದಲೂ ಸಿಕ್ಕಿಲ್ಲ ಎಂಬುದು ವ್ಯಥೆ.

ಕಾವ್ಯಾಳ ತಂದೆ ವೆಂಕಟೇಶ್ ಆಚಾರ್—ಬಡತನದ ನಡುವೆಯೂ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿ, ಕುಟುಂಬವನ್ನು ನಗೆಯಿಲ್ಲದೆ ಬೆಳೆಸಿದ ಮಹಾನ್ ವ್ಯಕ್ತಿ. ಆಶ್ರಯ ಯೋಜನೆಯಡಿ ಮನೆ ಕಟ್ಟಲೆಂದು 12 ವರ್ಷಗಳ ಹಿಂದೇ ಇಟ್ಟ ಮೊದಲ ಗುದ್ದಲಿಯ ಶಬ್ದವೂ ಇಂದಿಗೂ ಅವರ ಕಿವಿಯಲ್ಲಿ ಮರುಕಳಿಸುತ್ತಿದೆ. ಆದರೆ ಆ ಗುದ್ದಲಿಯ ನಂತರ ಮನೆ ಗೋಡೆಗಳು ಬೆಳೆಯಬೇಕಾಗಿದ್ದ ಜಾಗದಲ್ಲಿ ಇಂದು ಮಣ್ಣು, ಕಲ್ಲು ಮತ್ತು ಕನಸುಗಳ ಅವಶೇಷಗಳೇ ಉಳಿದಿವೆ.ಮನೆ ಇನ್ನೂ ಪೂರ್ಣಗೊಳ್ಳದೆ ಪಕ್ಕದಲ್ಲಿಯೇ ಟಾರ್ಪಲ್ ಹೊದಿಸಿದ ಶೆಡ್‌ನಲ್ಲಿ ಮಳೆಯಾದರೂ, ಗಾಳಿಯಾದರೂ, ಚಳಿಯಾಗಾದರೂ ಈ ಕುಟುಂಬ ಮೌನವಾಗಿ ಬದುಕನ್ನು ತಾಳುತ್ತಿದೆ.

ವಿಶ್ವ ಜಯಿಸಿದ ಮಗಳಿಗೆ “ನಿನ್ನ ಮನೆ ಎಲ್ಲಿದೆ?” ಎಂದು ಕೇಳಬೇಕಾದರೆ, ಅವಳು ತಲೆತಗ್ಗಿಸಬೇಕಾಗುವ ಪರಿಸ್ಥಿತಿ ನಮ್ಮ ಸಮಾಜದ ಹೆಮ್ಮೆಯನ್ನು ಪ್ರಶ್ನಿಸುತ್ತದೆ.

ಒಂದೆಡೆ ಸನ್ಮಾನಗಳ ಬೆಳಕು—ಮತ್ತೊಂದೆಡೆ ಶೆಡ್‌ನಲ್ಲಿನ ಕತ್ತಲು…

ಒಂದೆಡೆ ಮೆರವಣಿಗೆ—ಮತ್ತೊಂದೆಡೆ ಮಳೆಗಾಲದ ಸೋರಿಕೆ…

ಒಂದೆಡೆ ಪ್ರಶಂಸೆ—ಮತ್ತೊಂದೆಡೆ ಬದುಕಿಗೆ ಹಣದ ಕೊರತೆ…

ಈ ವೈಪರಿತ್ಯಗಳ ನಡುವೆ ಕಾವ್ಯಾಳ ಕುಟುಂಬದ ಹೃದಯ ಬಿರುಕು “ನಮಗೆ ಬೇಕಾಗಿರುವುದು ಗೌರವ ಅಲ್ಲ… ಸಹಾಯ” ಎಂದು ಹೇಳುತ್ತಿರುವಂತೆ ಭಾಸವಾಗುತ್ತದೆ.

ಮನೆ ಕಟ್ಟುತ್ತಿರುವ ಜಾಗಕ್ಕೂ ಅರಣ್ಯ ಹಕ್ಕು ಸಮಿತಿಯಿಂದ ಭೂ ಹಕ್ಕು ಪಡೆಯಲು ಹೋರಾಟವೇ ಇನ್ನೊಂದು ನೋವು , ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೌರವವನ್ನು ಎತ್ತಿದ ಹುಡುಗಿ, ತನ್ನ ಮನೆಯ ಗೂಡನ್ನು ಕಟ್ಟಿಕೊಳ್ಳಲು ಹೋರಾಡಬೇಕಾದ್ರೆ… ನಾವು ಮಾಡಿರುವ ಸನ್ಮಾನಗಳ ಅರ್ಥವೇನು?

ಕಾವ್ಯಾಳ ಕಥೆ ಕೇವಲ ಒಂದು ಕುಟುಂಬದ ಕಥೆಯಲ್ಲ—ಇದು ನಮ್ಮ ಮನಸನ್ನು ಪ್ರಶ್ನಿಸಿಕೊಳ್ಳುವ ಸಮಾಜದ ಕರೆಯಾಗಿದೆ.ಈ ಚಾಂಪಿಯನ್‌ಗೆ ಕೈ ತಟ್ಟಿ ಅಭಿನಂದಿಸಿದೆವು… ಈಗ ಕೈಹಿಡಿದು ಬದುಕು ಕಟ್ಟಿಕೊಡುವ ಸಮಯ.

ಕಾವ್ಯಾಳಿಗೆ ನೆರವಾಗಲು ಬಯಸುವವರು ಕೆಳಗಿನ ಖಾತೆ ಸಂಖ್ಯೆ ಅಥವಾ ಕ್ಯೂಆರ್ ಕೋಡ್ ಮೂಲಕ ಸಹಾಯ ಮಾಡಬಹುದು.ಒಂದು ಸನ್ಮಾನ ಕ್ಷಣಿಕ… ಆದರೆ ನಿಮ್ಮ ನೆರವು ಅವಳ ಭವಿಷ್ಯವನ್ನು ಬದಲಿಸಬಲ್ಲದು.

ಬರಹ – ರಫ಼ಿ ರಿಪ್ಪನ್ ಪೇಟೆ
ಧ್ವನಿ – ವಿನಯ್ ಪುರದಾಳು

 ಕಾವ್ಯಾ ವಿ ಅಕೌಂಟ್ ನಂಬರ್ – 0534108022637

IFSC CODE – CNRB0000534

ಸಂಪರ್ಕಿಸಿ : 9900963914 (ವೆಂಕಟೇಶ್ ಆಚಾರ್ , ತಂದೆ )

80957 80370 (ಸುಧೀಂದ್ರ ಪೂಜಾರಿ , ಗ್ರಾಪಂ ಉಪಾಧ್ಯಕ್ಷರು)