Headlines

ಕುಂಸಿಯ ವೃದ್ಧೆಯ ಕ್ರೂರ ಹತ್ಯೆ ಕೇಸ್ – ಕೊಲೆಗಾರ ಮಗನಲ್ಲ..!

ಕುಂಸಿಯ ವೃದ್ಧೆಯ ಕ್ರೂರ ಹತ್ಯೆ ಕೇಸ್ – ಕೊಲೆಗಾರ ಮಗನಲ್ಲ..!! ವೃದ್ದೆಯ ಕೈಯಿಂದ ಫಲಾವ್ ತಿಂದು ಹಿಂಬದಿಯಿಂದ ಹತ್ಯೆಗೈದಿದ್ದ
ಇಬ್ಬರು ಯುವಕರ ಬಂಧನ

ಶಿವಮೊಗ್ಗ: ತಾಲೂಕಿನ ಕುಂಸಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ಬಸಮ್ಮ ಅವರ ಮೇಲೆ ನಡೆದಿದ್ದ ಕ್ರೂರ ಹತ್ಯೆ ರಹಸ್ಯಕ್ಕೆ ಎರಡು ತಿಂಗಳ ಬಳಿಕ ತೆರೆ ಬಿದ್ದಿದೆ. ದೂರದೃಷ್ಟಿಯಿಂದ ರೂಪಿಸಿದ ದರೋಡೆ–ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದೋಚಿದ್ದ ಚಿನ್ನಾಭರಣ, ಬೈಕ್ ಸೇರಿದಂತೆ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರು ;

ಕುಂಸಿ ಗ್ರಾಮದ ಅಮಾನ್ ಸಿಂಗ್ ಅಲಿಯಾಸ್ ಮುನ್ನಾ (21) ಮತ್ತು ಸೋಮಶೆಟ್ಟಿಕೊಪ್ಪದ ವಿಕಾಸ್ (21) ಎಂಬ ಯುವಕರು ಆರೋಪಿಗಳು. ಕಳೆದ ಅಕ್ಟೋಬರ್ 2 ರಂದು ರಜಪೂತರ ಬೀದಿಯಲ್ಲಿ ನಡೆದಿದ್ದ ವೃದ್ಧೆ ಬಸಮ್ಮ ಅವರ ಕೊಲೆ ಪ್ರಕರಣದ ಕುರಿತು ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರ ಬಿಡುಗಡೆ ಮಾಡಿದರು.

ಚಿನ್ನಾಭರಣವೇ ಕೊಲೆಗೆ ದಾರಿ :

ಬಸಮ್ಮ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ಆರೋಪಿಗಳು, ಘಟನೆಗಿಂತ ಎರಡು ತಿಂಗಳ ಮೊದಲೇ ಕೊಲೆ-ದರೋಡೆಗೆ ಪ್ಲಾನ್ ರೂಪಿಸಿದ್ದರು. ಅಕ್ಟೋಬರ್ 2ರಂದು ಸಂಜೆ ಗ್ಯಾಸ್ ಸಿಲಿಂಡರ್ ಹಾಕಿಕೊಡುವ ನೆಪದಲ್ಲಿ ಮನೆಗೆ ಪ್ರವೇಶಿಸಿ, ವೃದ್ಧೆಗೆ ಪಲಾವ್ ತಿನ್ನಿಸಿದ್ದೂ, ನಂತರ ನೀರು ತರಿಸುವ ಮುನ್ನಾನೆ ಆರಿತವಾದ ಆಯುಧದಿಂದ 15-20 ಬಾರಿ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಮೊದಲ ಶಂಕೆ ಪುತ್ರನ ಮೇಲೆ — ಬಳಿಕ ಪೊಲೀಸರಿಗೆ ಸವಾಲು

ಪ್ರಕರಣ ದಾಖಲಾಗುತ್ತಿದ್ದಂತೆ ಬಸಮ್ಮ ಅವರ ಪುತ್ರ ರಮೇಶ್ ಮೇಲೆ ಶಂಕೆ ವ್ಯಕ್ತವಾಗಿತ್ತು. ವಿಚಾರಣೆ ಬಳಿಕ ಆತನ ಪಾತ್ರವಿಲ್ಲವೆಂಬುದು ಸ್ಪಷ್ಟವಾದರೂ, ಹಂತಕರು ಯಾರು ಎಂಬುದು ಪತ್ತೆಯಾಗದೆ ಪ್ರಕರಣ ಗೊಂದಲಗೊಂಡಿತ್ತು.

ಅಪರಾಧ ಬೇಧಿಸಲು ಎಎಸ್‌ಪಿಗಳಾದ ರಮೇಶ್, ಎ.ಜಿ. ಕಾರಿಯಪ್ಪ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಸಂಜೀವ್ ಕುಮಾರ್ ಮೇಲ್ವಿಚಾರಣೆಯಲ್ಲಿ, ಇನ್‍ಸ್ಪೆಕ್ಟರ್ ಎಂ.ಎಸ್. ದೀಪಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು.

ಶವ ಸಾಗಾಟಕ್ಕೂ ಪ್ಲಾನ್ — ರಂಗೋಲಿ ಕಾಟಕ್ಕೆ ಪ್ಲಾನ್‌ ಫೇಲ್

ಕೊಲೆ ಮಾಡಿದ ಮರುದಿನ ಶವವನ್ನು ಗುಪ್ತವಾಗಿ ಸಾಗಿಸಲು ಆರೋಪಿ ಅಮಾನ್-ವಿಕಾಸ್ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಬೆಳಗ್ಗೆ ಎದುರಿನ ಮನೆಯ ಯುವತಿಯೊಬ್ಬಳು ರಂಗೋಲಿ ಹಾಕುವಾಗ ಬಾಗಿಲು ಬಡಿದು ಕೂಗಿದರೂ ಪ್ರತಿಕ್ರಿಯೆ ಬರದ ಕಾರಣ ಅನುಮಾನಗೊಂಡು ಪುತ್ರ ರಮೇಶ್‌ಗೆ ಮಾಹಿತಿ ನೀಡಿದರು.

ರಮೇಶ್ ಸ್ಥಳಕ್ಕೆ ಬಂದು ಬಾಗಿಲು ಮುರಿಯಲು ಮುಂದಾಗುತ್ತಿದ್ದಾಗ ಗ್ರಾಮಸ್ಥರು ಕೂಡಿಬಂದರು. ಆತಂಕಗೊಂಡ ಆರೋಪಿಗಳು ಅಟ್ಟದಲ್ಲಿ ಅಡಗಿ, ಬಳಿಕ ಕಿಟಕಿಯ ಮೂಲಕ ತಪ್ಪಿಸಿಕೊಂಡು ಅಮಾನ್ ಮನೆಯತ್ತ ಓಡಿದ್ದಾಗಿ ಪೊಲೀಸರು ಹೇಳಿದರು.

ಜಪ್ತಿ ಮಾಡಿದ ವಸ್ತುಗಳು ;

ಕಿವಿ ಓಲೆ

ಕಿವಿಯ ಚೈನ್

ಉಂಗುರ

ದರೋಡೆಗೆ ಬಳಸಿದ ಬೈಕ್

ಇಬ್ಬರ ಮೊಬೈಲ್‌ಗಳು

ಕೆಲವು ಪುರಾವೆಗಳು

ಈ ಸಂಧರ್ಭದಲ್ಲಿ ಎಎಸ್‌ಪಿ ರಮೇಶ್, ಎ.ಜಿ. ಕಾರಿಯಪ್ಪ, ಡಿವೈಎಸ್‌ಪಿ ಸಂಜೀವ್ ಕುಮಾರ್, ಬಾಬು ಅಂಜನಪ್ಪ, ಇನ್‍ಸ್ಪೆಕ್ಟರ್ ಎಂ.ಎಸ್. ದೀಪಕ್ ಹಾಜರಿದ್ದರು.

– POSTMAN NEWS ಕ್ರೈಂ ಬ್ಯೂರೋ