ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು
ರಿಪ್ಪನ್ ಪೇಟೆ ; ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಯೊಂದಿಗೆ ಯುವಕನೊಬ್ಬ ಬಾಲ್ಯವಿವಾಹವಾಗಿದ್ದು ಈ ಹಿನ್ನಲೆಯಲ್ಲಿ ಯುವಕನ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಳ ಗ್ರಾಮದ ಮೋಹನ್‌ಕುಮಾರ್ ಎಂಬುವರು ಅಪ್ರಾಪ್ತೆಯೊಂದಿಗೆ ವಿವಾಹವಾಗಿರುವ ಘಟನೆ ಬಹಿರಂಗವಾಗಿ, ಕಾನೂನು ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯೊಂದಿಗೆ ಕಳೆದ ಆಗಸ್ಟ್ 29ರಂದು ದೇವಸ್ಥಾನವೊಂದರಲ್ಲಿ ವಿವಾಹ ನಡೆದಿದ್ದು, ಬಳಿಕ ಯುವಕ ತನ್ನ ಪತ್ನಿ ಎಂದು ಹೇಳಿಕೊಂಡು ಬಾಲಕಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾನೆ.
ಈ ಮಾಹಿತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಲಭಿಸಿದ ನಂತರ, ಶಿವಮೊಗ್ಗ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಬಾಲ್ಯ ವಿವಾಹ ನಡೆದಿರುವುದು ಖಚಿತವಾಗಿದೆ ನಂತರ ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಅಪ್ರಾಪ್ತೆಯಾಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಈ ವಿವಾಹವನ್ನು ಕಾನೂನುಬಾಹಿರವೆಂದು ಘೋಷಿಸಿದರು.
ಅಪ್ರಾಪ್ತೆಯೊಂದಿಗೆ ವಿವಾಹ ಮಾಡಿರುವುದು ಕಾನೂನು ಪ್ರಕಾರ ಗಂಭೀರ ಅಪರಾಧವಾಗಿದ್ದು, ಇದು ಮಕ್ಕಳ ಹಕ್ಕುಗಳಿಗೆ ಧಕ್ಕೆ ತರುವುದರ ಜೊತೆಗೆ, ಪೊಕ್ಸೋ ಕಾಯ್ದೆಯಡಿ (Protection of Children from Sexual Offences Act) ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅವರು ಪ್ರಕರಣವನ್ನು ದಾಖಲಿಸಿದ್ದಾರೆ.
ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಪ್ರಕಾರ, ಹುಡುಗಿಯ ಕನಿಷ್ಠ ವಿವಾಹ ವಯಸ್ಸು 18 ವರ್ಷ ಹಾಗೂ ಹುಡುಗರದು 21 ವರ್ಷ. ಈ ವಯೋಮಿತಿಯನ್ನು ಪಾಲಿಸದೇ ನಡೆದಿರುವ ವಿವಾಹವು ಅಮಾನ್ಯವಾಗಿದ್ದು, ಇಂತಹ ಪ್ರಕರಣಗಳಲ್ಲಿ ಪಾಲ್ಗೊಂಡವರಿಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
