ನಾಳೆ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ : ಪೊಲೀಸ್ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ …??
ರಿಪ್ಪನ್‌ಪೇಟೆ : ಪಟ್ಟಣದ ತಿಲಕ್ ಮಂಟಪದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಲಾದ 58ನೇ ವರ್ಷದ ಗಣಪತಿ ವಿಸರ್ಜನ ಪೂರ್ವ ರಾಜಬೀದಿ ಉತ್ಸವ ನಾಳೆ (06-09-2025) ಅದ್ದೂರಿಯಾಗಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದ್ದು, ಅದಾದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ಈ ಮೆರವಣಿಗೆಯಲ್ಲಿ ಕಲಾತಂಡಗಳು, ಮಂಗಳವಾದ್ಯ, ಚಂಡೇಮೇಳ, ಡೊಳ್ಳುಕುಣಿತ, ಕಹಳೆ, ಕೀಲುಕುದುರೆ ಗೊಂಬೆ, ನವಿಲುನೃತ್ಯ, ಬೇಡರ ನೃತ್ಯ, ವೀರಗಾಸೆ, ಜಾಂಜಾ ಪಥಾಕ್, ತಟ್ಟಿರಾಯ ಹಾಗೂ ನಗಾರಿ-ಡೊಳ್ಳು ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ರಂಗು ಹಚ್ಚಲಿವೆ ಎಂದು ಸಮಿತಿ ಅಧ್ಯಕ್ಷ ಸುಧೀರ್ ಪಿ ಮತ್ತು ಕಾರ್ಯದರ್ಶಿ ಮುರುಳಿ ಕೆರೆಹಳ್ಳಿ ತಿಳಿಸಿದ್ದಾರೆ.
ರಾತ್ರಿ 10.30ಕ್ಕೆ ವಿನಾಯಕ ವೃತ್ತದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಸರಗಮ್ ಮ್ಯೂಸಿಕಲ್ ಬ್ಯಾಂಡ್ ಸಂಗೀತ ಕಚೇರಿ ನಡೆಯಲಿದೆ. 15 ರಿಂದ 20 ಸಾವಿರ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
ಪೊಲೀಸ್ ಬಿಗಿ ಬಂದೋಬಸ್ತ್
ಸಮಾರಂಭಕ್ಕಾಗಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಸಿಟಿವಿ, ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾವಹಿಸಲಾಗುತ್ತಿದ್ದು, 1 ಡಿವೈಎಸ್ಪಿ, 2 ಸರ್ಕಲ್ ಇನ್ಸ್‌ಪೆಕ್ಟರ್, 7 ಸಬ್ ಇನ್ಸ್‌ಪೆಕ್ಟರ್, 18 ಎಎಸ್‌ಐ, 80 ಪೊಲೀಸ್ ಸಿಬ್ಬಂದಿ, 1 ತುಕಡಿ ಕೆಎಸ್‌ಆರ್‌ಪಿ, 1 ತುಕಡಿ ಡಿಇಆರ್ ಹಾಗೂ 103 ಗೃಹರಕ್ಷಕ ದಳದವರು ನಿಯೋಜಿಸಲ್ಪಟ್ಟಿದ್ದಾರೆ.
