Headlines

ರಿಪ್ಪನ್‌ಪೇಟೆ | ಗ್ರಾಮ ಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಕಾಂಗ್ರೆಸ್ ಸೇರ್ಪಡೆ – ಶಾಸಕ ಬೇಳೂರು ಸಮ್ಮುಖದಲ್ಲಿ ಸೇರ್ಪಡೆ

ರಿಪ್ಪನ್‌ಪೇಟೆ | ಗ್ರಾಮಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಕಾಂಗ್ರೆಸ್ ಸೇರ್ಪಡೆ – ಶಾಸಕ ಬೇಳೂರು ಸಮ್ಮುಖದಲ್ಲಿ ಸೇರ್ಪಡೆ

ರಿಪ್ಪನ್‌ಪೇಟೆ : ಪಟ್ಟಣದ ಸ್ಥಳೀಯ ರಾಜಕೀಯದಲ್ಲಿ ಗಮನ ಸೆಳೆಯುವಂತಹ ಬೆಳವಣಿಗೆಯೊಂದರಲ್ಲಿ ರಿಪ್ಪನ್‌ಪೇಟೆ ಗ್ರಾಮಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗೃಹ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಧ್ವಜವನ್ನು ಹಿಡಿದು ಪಕ್ಷದ ಸದಸ್ಯತ್ವ ಪಡೆದರು.

ನಿರೂಪ್ ಕುಮಾರ್ ಅವರು ರಾಜಕೀಯ ಜೀವನವನ್ನು ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಘಟಕದ ಮೂಲಕ ಪ್ರಾರಂಭಿಸಿದ್ದರು.ಹೊಸನಗರ ತಾಲೂಕ್ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘಟನಾ ಚತುರನಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಬದಲಾದ ರಾಜಕೀಯ ಸ್ಥಿತ್ಯಂತರ ನಡುವೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ “ರಾಷ್ಟ್ರ ಭಕ್ತರ ಬಳಗ” ದೊಂದಿಗೆ ಅವರು ಗುರುತಿಸಿಕೊಂಡಿದ್ದರು.

ಗ್ರಾಮಪಂಚಾಯತ್ ಚುನಾವಣೆಯಲ್ಲಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬರುವೆ 3ನೇ ವಾರ್ಡ್‌ನಿಂದ ಸ್ಪರ್ಧಿಸಿ 500 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿ ಯುವ ನಾಯಕನಾಗಿ ತಮ್ಮ ರಾಜಕೀಯ ಬಲವನ್ನು ತೋರಿಸಿದ್ದರು. ಅದಲ್ಲದೆ, ಎರಡನೇ ಅವಧಿಯ ರಿಪ್ಪನ್‌ಪೇಟೆ ಗ್ರಾಮಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಸಮಯದಲ್ಲಿ ತೀವ್ರ ಒತ್ತಡ ಮತ್ತು ರಾಜಕೀಯ ಲಾಬಿಗಳ ನಡುವೆ ತಮ್ಮ ಪಕ್ಷಪರತೆ ಕಾಪಾಡಿಕೊಂಡು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿದ್ದರು. ಇದರಿಂದ ಸ್ಥಳೀಯ ಮಟ್ಟದಲ್ಲಿ ಪಕ್ಷ ನಿಷ್ಠನಾಗಿಯೇ ಪರಿಗಣಿಸಲ್ಪಟ್ಟಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ಸ್ಥಳೀಯ ಮಟ್ಟದ ರಾಜಕೀಯ ವಾತಾವರಣ ಬದಲಾಗುತ್ತಿದ್ದು, ಕಾಂಗ್ರೆಸ್ ಪಕ್ಷವು ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಮುಂದಾಗಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಜನಸಂಪರ್ಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಗಮನಾರ್ಹ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ನಾಯಕತ್ವ ನಿರೂಪ್ ಕುಮಾರ್ ಅವರನ್ನು ಆಕರ್ಷಿಸಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಸೇರ್ಪಡೆಯ ನಂತರ ಮಾತನಾಡಿದ ನಿರೂಪ್ ಕುಮಾರ್, “ನಾನು ಸಾರ್ವಜನಿಕ ಜೀವನದಲ್ಲಿ ಸದಾ ಜನಪರ ರಾಜಕೀಯವನ್ನು ಅವಲಂಬಿಸಿದ್ದೇನೆ. ಕಾಂಗ್ರೆಸ್ ಪಕ್ಷದ ನಿಲುವು ಹಾಗೂ ಜನಪರ ಕಾರ್ಯಕ್ರಮಗಳು ನನ್ನನ್ನು ಪ್ರೇರೇಪಿಸಿವೆ. ಮುಂದಿನ ದಿನಗಳಲ್ಲಿ ಪಕ್ಷದ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಾ ಜನರ ವಿಶ್ವಾಸಕ್ಕೆ ತಕ್ಕಂತೆ ಸೇವೆ ಸಲ್ಲಿಸುವುದು ನನ್ನ ಉದ್ದೇಶ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷ ಸೇರ್ಪಡೆ ಸಂಧರ್ಭದಲ್ಲಿ ತಾಪಂ ಮಾಜಿ ಸದಸ್ಯ ಚಂದ್ರೇಶ್ ಎನ್ , ಕೆಡಿಪಿ ಸದಸ್ಯ ಆಸೀಫ಼್ ಭಾಷಾ , ಗ್ರಾಪಂ ಸದಸ್ಯರಾದ ಮಧುಸೂದನ್ , ಪ್ರಕಾಶ್ ಪಾಲೇಕರ್ , ರಿಪ್ಪನ್ ಪೇಟೆ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ , ಮುಖಂಡರಾದ ಈಶ್ವರಪ್ಪ ಗೌಡ , ನೇಮಣ್ಣ ಬಂಡಿ ಹಾಗೂ ಇನ್ನಿತರರು ಇದ್ದರು.