A shocking crime from Telangana where a nurse allegedly murdered her parents by administering an overdose of anesthesia after they opposed her inter-caste love marriage.
ತೆಲಂಗಾಣದಲ್ಲಿ ಮಗಳೇ ತನ್ನ ತಂದೆ–ತಾಯಿಗೆ ನಿದ್ರಾಜನಕ ಇಂಜೆಕ್ಷನ್ ನೀಡಿ ಕೊಲೆಗೈದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬಾಯ್‌ಫ್ರೆಂಡ್ ಜೊತೆ ಮದುವೆಗೆ ಪೋಷಕರು ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ, ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಗಳು ತನ್ನ ವೃತ್ತಿಪರ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿದ್ದಾಳೆ.
ಆರೋಪಿ ನಕ್ಕಲ ಸುರೇಖಾ, ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಂದೆ ದಶರಥ (58) ಮತ್ತು ತಾಯಿ ಲಕ್ಷ್ಮಿ (54) ಅವರಿಗೆ ‘ಮೈ–ಕೈ ನೋವು’ ಎಂದು ಹೇಳಿ ಅನಸ್ತೇಶಿಯಾ ನೀಡಿದ್ದಾಳೆ. ಆದರೆ, ಚಿಕಿತ್ಸೆ ನೆಪದಲ್ಲಿ ನೀಡಲಾದ ಇಂಜೆಕ್ಷನ್ ಮಿತಿಮೀರಿದ ಪ್ರಮಾಣದಲ್ಲಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾರಂ ಪೊಲೀಸ್ ಠಾಣೆಯ ಮಾಹಿತಿ ಪ್ರಕಾರ, ಸುರೇಖಾ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆತ ಬೇರೆ ಜಾತಿಗೆ ಸೇರಿದವನಾಗಿದ್ದರಿಂದ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನೆಯಲ್ಲಿ ನಿರಂತರ ಕಲಹ ನಡೆಯುತ್ತಿತ್ತು.
ಈ ವಿರೋಧದಿಂದ ಕೋಪಗೊಂಡ ಸುರೇಖಾ, ತನ್ನ ನರ್ಸಿಂಗ್ ಕೌಶಲ ಬಳಸಿ ಸಂಶಯವಿಲ್ಲದೆ ಪೋಷಕರನ್ನು ಕೊಲ್ಲುವ ಸಂಚು ರೂಪಿಸಿದ್ದಾಳೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಜನವರಿ 24ರ ರಾತ್ರಿ, ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ‘ಆರ್ಟಾಸಿಲ್ (Artacil)’ ಎಂಬ ನಿದ್ರಾಜನಕ ಔಷಧವನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್ ಮಾಡಿ ಪೋಷಕರ ಜೀವ ಹರಣ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧ ಪೊಲೀಸರು ಸುರೇಖಾವನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ರಾಜ್ಯಾದ್ಯಂತ ಭಾರೀ ಆಘಾತ ಮೂಡಿಸಿದೆ.














