11 people were bitten in a suspected rabid dog attack in Holehonnur, Shivamogga district. All injured victims received immediate medical treatment and rabies vaccination.
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ಹುಚ್ಚು ನಾಯಿ ದಾಳಿಯ ಆತಂಕಕಾರಿ ಘಟನೆಗಳು ವರದಿಯಾಗಿದ್ದು, ಒಟ್ಟು 11 ಜನರಿಗೆ ನಾಯಿ ಕಚ್ಚಿದ ಪ್ರಕರಣಗಳು ಬೆಳಕಿಗೆ ಬಂದಿವೆ. ದಾಳಿ ನಡೆಸಿದ ನಾಯಿಯು ಹುಚ್ಚು ನಾಯಿ ಇರಬಹುದೆಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ತಕ್ಷಣ ಗಾಯಗೊಂಡ ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅಗತ್ಯವಾದ ರೇಬೀಸ್ ಲಸಿಕೆಗಳನ್ನು ಕೂಡಲೇ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಯಿ ಕಚ್ಚಿದವರಲ್ಲಿ ಹೊಳೆಹೊನ್ನೂರಿನ ನಿವಾಸಿಗಳಾದ ಹೇಮಾವತಿ, ನಟರಾಜ, ಕವಿತಾ, ನೀಲಮ್ಮ, ಜಬ್ಬಾರ್ ಖಾನ್, ಮದಿಹಾ ಸೇರಿದಂತೆ ಅರಹತೊಳಲು ಗ್ರಾಮದ ಕೆ. ರಾಜಪ್ಪ ಹಾಗೂ ತರೀಕೆರೆಯ ಗಿರೀಶ್ ಸೇರಿದ್ದಾರೆ. ದಾಳಿಯಲ್ಲಿ ಕೆಲವರಿಗೆ ಕೈ, ಕಾಲು ಹಾಗೂ ದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿದ್ದು, ಎಲ್ಲರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಾಯಿ ಕಡಿತ ಪ್ರಕರಣಗಳ ವಿವರಗಳೊಂದಿಗೆ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಪಟ್ಟಣದಲ್ಲಿ ಸಂಚರಿಸುವ ಬೀದಿನಾಯಿಗಳನ್ನು ಹಿಡಿದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು, ಅಗತ್ಯವಿದ್ದರೆ ನಿಷ್ಕ್ರಿಯಗೊಳಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತೆ ಶಿಫಾರಸು ಮಾಡಲಾಗಿದೆ.
ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಂಯುಕ್ತವಾಗಿ ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದ್ದು, ಸಾರ್ವಜನಿಕರು ಅಜಾಗರೂಕರಾಗದೆ ಮಕ್ಕಳನ್ನು ಮತ್ತು ವೃದ್ಧರನ್ನು ವಿಶೇಷವಾಗಿ ಗಮನಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












