POSTMANNEWS

ನೈಜ ಸುದ್ದಿ ನೇರ ಬಿತ್ತರ..

ಬಸ್ಸಿನ ECM ಬೋರ್ಡ್ ಸ್ಫೋಟ | ಬೆಂಕಿಯ ಕೆನ್ನಾಲಗೆ ಮಧ್ಯ ನಿಂತ ಒಬ್ಬ ಚಾಲಕ – 36 ಜೀವಗಳ ಪುನರ್ಜನ್ಮ

A major tragedy was averted in Shivamogga district when a private sleeper bus caught fire. Thanks to the driver’s timely decision and functional emergency exits, 36 passengers were rescued safely.

ಬಸ್ಸಿನ ECM ಬೋರ್ಡ್ ಸ್ಫೋಟ | ಬೆಂಕಿಯ ಕೆನ್ನಾಲಗೆ ಮಧ್ಯ ನಿಂತ ಒಬ್ಬ ಚಾಲಕ – 36 ಜೀವಗಳ ಪುನರ್ಜನ್ಮ

ಅನ್ನಪೂರ್ಣೇಶ್ವರಿ ಬಸ್ ಅಗ್ನಿ ಅವಘಡ –  ಚಾಲಕ ದೇವರಾಜ್ ಧೈರ್ಯಕ್ಕೆ ಸಲಾಂ

ಶಿವಮೊಗ್ಗ ಜಿಲ್ಲೆಯ ಹೊಸನಗರ–ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಅನ್ನಪೂರ್ಣೇಶ್ವರಿ ಸ್ಲೀಪರ್ ಬಸ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡವು ಕ್ಷಣಮಾತ್ರದಲ್ಲಿ 36 ಜೀವಗಳನ್ನು ಕಿತ್ತುಕೊಳ್ಳುವ ಭೀಕರ ಸ್ಥಿತಿಗೆ ತಲುಪಿತ್ತು. ಆದರೆ, ಆ ಕ್ಷಣದಲ್ಲಿ ಒಬ್ಬ ವ್ಯಕ್ತಿಯ ಸಮಯಪ್ರಜ್ಞೆ, ಧೈರ್ಯ ಮತ್ತು ಹೊಣೆಗಾರಿಕೆ 36 ಪ್ರಯಾಣಿಕರಿಗೆ ಪುನರ್ಜನ್ಮ ನೀಡಿತು. ಆ ವ್ಯಕ್ತಿಯೇ ಬಸ್ ಚಾಲಕ ದೇವರಾಜ್.

ರಿಪ್ಪನ್‌ಪೇಟೆಯಿಂದ ಹೊರಟ ಅನ್ನಪೂರ್ಣೇಶ್ವರಿ ಬಸ್ ಅರಸಾಳು ದಾಟಿ ಸೂಡೂರು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಬೇಕಿದ್ದ ಕ್ಷಣದಲ್ಲಿ ಚಾಲಕ ದೇವರಾಜ್ ಅವರಿಗೆ ಬಸ್ ಒಳಗಿನಿಂದ ವಯರ್ ಸುಟ್ಟ ವಾಸನೆ ತಟ್ಟಿದೆ. ಕಾಡಿನೊಳಗೆ ವಾಹನ ನಿಲ್ಲಿಸುವುದು ಅಪಾಯಕರ ಎಂಬುದನ್ನು ಅರಿತ ಅವರು, ಮುಂದೆ ಬರುವ ಸೂಡೂರು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ಬಸ್ ನಿಲ್ಲಿಸಿ ಪರಿಶೀಲಿಸೋಣ ಎಂದು ಕ್ಲೀನರ್‌ಗೆ ತಿಳಿಸುವಷ್ಟರಲ್ಲಿ ಅನಾಹುತ ಸಂಭವಿಸಿದೆ.

ಬಸ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಚಾಲಕನ ಆಸನದ ಹಿಂಬದಿಯಲ್ಲಿ ಅಳವಡಿಸಿದ್ದ ECM ಬೋರ್ಡ್ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮವಾಗಿ ಬ್ರೇಕ್ ವಾಕ್ಯೂಮ್ ವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡು ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಬೆಂಕಿಯ ಕೆನ್ನಾಲಿಗೆಗಳು ಚಾಲಕ ದೇವರಾಜ್ ಅವರ ಬೆನ್ನಿನ ಭಾಗವನ್ನು ಸುಡುತ್ತಾ ಹೋಗುತ್ತಿದ್ದವು. ನೋವು, ಆತಂಕ, ಸಾವಿನ ಭೀತಿ… ಎಲ್ಲವೂ ಒಂದೇ ಕ್ಷಣದಲ್ಲಿ ಎದುರಿತ್ತು.

ಆದರೂ ದೇವರಾಜ್ ಧೈರ್ಯ ಕಳೆದುಕೊಳ್ಳಲಿಲ್ಲ.

ಆ ಕ್ಷಣದಲ್ಲೇ ಬಸ್ ಅನ್ನು ಇನ್ನೂ ಸುಮಾರು 500 ಮೀಟರ್ ದೂರ ಚಲಾಯಿಸಿ, ರಸ್ತೆ ಬಲಭಾಗದಲ್ಲಿದ್ದ ಮರಕ್ಕೆ ತಾಗುವಂತೆ ಅತ್ಯಂತ ಜಾಣ್ಮೆಯಿಂದ ನಿಲ್ಲಿಸಿದರು. ಒಂದು ವೇಳೆ ಅವರು ಚಾಲಕನ ಆಸನವನ್ನು ಬಿಟ್ಟು ಓಡಿ ಬಂದಿದ್ದರೆ, ಬಸ್ ಚರಂಡಿಗೆ ಉರುಳಿ ಪಲ್ಟಿಯಾಗುವ ಸಾಧ್ಯತೆ ಇತ್ತು. ಅಂಥದ್ದಾಗಿದ್ದರೆ, ಇಂದು 36 ಕುಟುಂಬಗಳ ಬದುಕೇ ಕತ್ತಲಲ್ಲಿ ಮುಳುಗುತ್ತಿತ್ತು.

ಇಷ್ಟಕ್ಕೂ ದೇವರಾಜ್ ಅಲ್ಲಿ ನಿಲ್ಲಲಿಲ್ಲ.

ಬಸ್ ನಿಲ್ಲಿಸಿದ ತಕ್ಷಣವೇ ತೀವ್ರ ನೋವಿನಲ್ಲಿಯೇ ಕೆಳಗೆ ಜಿಗಿದು, ಬಸ್‌ನ ಬಲಭಾಗ ಹಾಗೂ ಹಿಂಭಾಗದಲ್ಲಿದ್ದ ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳನ್ನು ತೆರೆಯುತ್ತಾ, “ಎಲ್ಲರೂ ಬೇಗ ಹೊರಗೆ ಬನ್ನಿ” ಎಂದು ಕೂಗಿಕೊಂಡಿದ್ದಾರೆ. 36 ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದ ಬಳಿಕವೇ ಅವರು ಮೂರ್ಚೆ ಹೋಗಿದ್ದಾರೆ. ಇದಕ್ಕಿಂತ ದೊಡ್ಡ ಸಮಯಪ್ರಜ್ಞೆ ಇನ್ನೇನೂ ಬೇಕು? ಇನ್ನೂ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ದೇವರಾಜ್ ಆದಷ್ಟು ಬೇಗ ಗುಣಮುಖರಾಗಲಿ..

ದುರಂತದ ಬಳಿಕ, ಘಟನೆಯ ವೇಳೆ ಅಲ್ಲಿ ಇರದ ಕೆಲವರು ಚಾಲಕ ಮತ್ತು ಬಸ್ ಮಾಲೀಕನ ವಿರುದ್ಧ ಸುಳ್ಳು ಕಥೆಗಳನ್ನು ಕಟ್ಟುತ್ತಾ ಮಾಧ್ಯಮಗಳಲ್ಲಿ ಹರಿಬಿಟ್ಟರು. ಆದರೆ ನಿಜವಾದ ಸತ್ಯವನ್ನು ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ.

36 ಜೀವಗಳನ್ನು ಉಳಿಸಿದವು ಆ ಎರಡು ಡೋರ್‌ಗಳು

ಸಾಮಾನ್ಯವಾಗಿ ಅನೇಕ ಸ್ಲೀಪರ್ ಬಸ್‌ಗಳಲ್ಲಿ ಅಗ್ನಿ ನಂದಿಸುವ ಕಿಟ್, ಪ್ರಾಥಮಿಕ ಚಿಕಿತ್ಸಾ ಕಿಟ್ ಹಾಗೂ ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳು ಇದ್ದರೂ ಅವು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಆದರೆ ಅನ್ನಪೂರ್ಣೇಶ್ವರಿ ಬಸ್‌ನಲ್ಲಿ ಸರಿಯಾದ ನಿರ್ವಹಣೆಯಿಂದ ಎರಡು ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳು ಸುಲಭವಾಗಿ ಓಪನ್ ಆಗಿವೆ. ಅದೇ ಕ್ಷಣದಲ್ಲಿ ಸಾವಿನಂಚಿಗೆ ತಲುಪಿದ್ದ 36 ಪ್ರಯಾಣಿಕರಿಗೆ ಪುನರ್ಜನ್ಮದ ಬಾಗಿಲು ತೆರೆದಂತಾಯಿತು.ಹೊಸನಗರದ ಮಾರಿಕಾಂಬ ದೇವಿಯ ಕೃಪೆಯಿಂದ ಭಾರಿ ಹೆಚ್ಚಿನ ಅನಾಹುತಗಳು ನಡೆದಿಲ್ಲ….

ಹೊಸನಗರದ ಯುವಕ ಸುಧೀರ್ ಮಾಲೀಕತ್ವದ ಅನ್ನಪೂರ್ಣೇಶ್ವರಿ ಬಸ್, ಸಾರಿಗೆ ಇಲಾಖೆಯ ನಿಯಮಾವಳಿಗಳಂತೆ ಕಾರ್ಯನಿರ್ವಹಿಸುತ್ತಿತ್ತು. ಬಸ್‌ನಲ್ಲಿ ಅಳವಡಿಸಿದ್ದ ಎರಡು ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳ ಕಾರಣದಿಂದಲೇ ಪ್ರಯಾಣಿಕರನ್ನು ತ್ವರಿತವಾಗಿ ಹಾಗೂ ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಯಿತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೋಸ್ಟ್‌ಮ್ಯಾನ್ ನ್ಯೂಸ್ – ಕೇವಲ ವರದಿ ಅಲ್ಲ, ಹೊಣೆಗಾರಿಕೆ

ಘಟನೆಯ ವಿಷಯ ತಿಳಿದ ತಕ್ಷಣ ಪೋಸ್ಟ್‌ಮ್ಯಾನ್ ನ್ಯೂಸ್ ತಂಡ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಹತ್ತು ನಿಮಿಷಗಳೊಳಗೆ ಸ್ಥಳಕ್ಕೆ ಧಾವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ಉರಿಯುತ್ತಿರುವ ಬಸ್ ಬಳಿ ಸಾರ್ವಜನಿಕರು ಸೇರದಂತೆ ಎರಡು ಕಡೆ ವಾಹನ ಸಂಚಾರ ತಡೆದು ಮತ್ತೊಂದು ಅನಾಹುತ ತಪ್ಪಿಸುವುದು, ರಿಪ್ಪನ್‌ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಯಾಣಿಕರನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವವರೆಗೂ ತಂಡ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿದೆ.

ಅದು ನಮ್ಮ ಕೆಲಸ ಮಾತ್ರವಲ್ಲ…
ನಮ್ಮ ಜವಾಬ್ದಾರಿಯೂ ಹೌದು.

ಒಟ್ಟಾರೆ 36 ಪ್ರಯಾಣಿಕರನ್ನು ಬಚಾವ್ ಮಾಡುವಲ್ಲಿ ಚಾಲಕ ದೇವರಾಜ್ ಸಮಯ ಪ್ರಜ್ಞೆ ಮೆಚ್ಚುವಂತದ್ದು..

– ರಫ಼ಿ ರಿಪ್ಪನ್ ಪೇಟೆ

About The Author