Parents staged a protest at Gartheekere KPS government school opposing the transfer of teacher Satyanarayan, alleging political interference and demanding withdrawal of the transfer order.
ತೀರ್ಥಹಳ್ಳಿ ತಾಲ್ಲೂಕಿನ ಗರ್ತಿಕೆರೆ ಕೆಪಿಎಸ್ ಸರ್ಕಾರಿ ಶಾಲೆಯ ಶಿಕ್ಷಕ ಸತ್ಯನಾರಾಯಣ್ ಅವರನ್ನು ವರ್ಗಾವಣೆಗೊಳಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟನೆ ನಡೆಸಿದರು. ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ಉತ್ತಮ ಶಿಕ್ಷಕನನ್ನು ಅನ್ಯಾಯವಾಗಿ ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಿ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಲೆಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸತ್ಯನಾರಾಯಣ್ ಅವರು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಕ್ಕಳ ಶೈಕ್ಷಣಿಕ ಸಾಧನೆಗೂ ಪೋಷಕರ ವಿಶ್ವಾಸಕ್ಕೂ ಕಾರಣರಾಗಿದ್ದಾರೆ ಎಂದು ಪೋಷಕರು ಹೇಳಿದರು. ಇಂತಹ ಶಿಕ್ಷಕರನ್ನು ವರ್ಗಾವಣೆಗೊಳಿಸುವುದು ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಭಟನೆಯ ವೇಳೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದವು. ರಾಜಕೀಯ ಕುಮ್ಮಕ್ಕಿನಿಂದ ಶಿಕ್ಷಕರನ್ನು ಟಾರ್ಗೆಟ್ ಮಾಡಿ ತೋಜೋವಧೆ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದರು. ಅಲ್ಲದೇ ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಸೋಮಶೇಖರ್ ಅವರು ಖಾಸಗಿ ಶಾಲೆಯೊಂದರ ನಿರ್ದೇಶಕರಾಗಿದ್ದು, ತಮ್ಮ ಖಾಸಗಿ ಶಾಲೆಗೆ ಅನುಕೂಲವಾಗುವ ಉದ್ದೇಶದಿಂದ ಜಿಲ್ಲಾದ್ಯಂತ ಉತ್ತಮ ಹೆಸರು ಪಡೆದಿರುವ ಗರ್ತಿಕೆರೆ ಸರ್ಕಾರಿ ಶಾಲೆಯನ್ನು ಅವನತಿಯತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಶಾಲಾಭಿವೃದ್ಧಿ ಸಮಿತಿಯನ್ನು ವಜಾಗೊಳಿಸಿ ನೂತನ ಸಮಿತಿಯನ್ನು ರಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಿಕ್ಷಕ ವರ್ಗಾವಣೆ ಆದೇಶವನ್ನು ಹಿಂತೆಗೆದುಕೊಳ್ಳುವ ಜೊತೆಗೆ ಶಾಲೆಯ ಹಿತದೃಷ್ಟಿಯಿಂದ ಪಾರದರ್ಶಕ ಆಡಳಿತವನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಆಗ್ರಹಗಳಿಗೆ ಸ್ಪಂದನೆ ದೊರಕದಿದ್ದರೆ, ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಟಿಸಿ ಪಡೆದು ಸಾಮೂಹಿಕವಾಗಿ ಬೇರೆ ಶಾಲೆಗಳಿಗೆ ದಾಖಲಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೋಷಕರು ಎಚ್ಚರಿಕೆ ನೀಡಿದರು. ವಿಷಯದ ಕುರಿತು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.











