POSTMANNEWS

ನೈಜ ಸುದ್ದಿ ನೇರ ಬಿತ್ತರ..

ಸ್ಲೀಪರ್ ಬಸ್‌ನಲ್ಲಿ ಬೆಂಕಿ ಹತ್ತಿಕೊಂಡಿದ್ದು ಹೇಗೆ? ಸಾರಿಗೆ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟನೆ

Transport department officials reveal the exact cause of the sleeper bus fire in Shivamogga. Short circuit in the ECM board led to brake failure, officials confirm after inspection.

ಶಿವಮೊಗ್ಗ ಜಿಲ್ಲೆಯ ಹೊಸನಗರ–ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ನಿಖರ ಕಾರಣವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಶಿವಮೊಗ್ಗ ಸಾರಿಗೆ ಇಲಾಖೆಯ ಹಿರಿಯ ಇನ್ಸ್ಪೆಕ್ಟರ್ ಮಲ್ಲೆಶಪ್ಪ ಹಾಗೂ ಸಾಗರ ಸಾರಿಗೆ ಇಲಾಖೆಯ ಹಿರಿಯ ಇನ್ಸ್ಪೆಕ್ಟರ್ ವಾಸುದೇವ್ ಅವರು ಜಂಟಿಯಾಗಿ ಬಸ್‌ನ್ನು ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಚಾಲಕನ ಆಸನದ ಹಿಂಬದಿಯಲ್ಲಿ ಅಳವಡಿಸಲಾಗಿದ್ದ ECM ಬೋರ್ಡ್ ಏಕಾಏಕಿ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಬಸ್‌ನ ಬ್ರೇಕ್ ವಾಕ್ಯೂಮ್ ವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡು ಚಾಲಕನ ನಿಯಂತ್ರಣ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಕಷ್ಟಕರ ಸಂದರ್ಭದಲ್ಲೂ ಸಮಯಪ್ರಜ್ಞೆ ಮೆರೆದ ಚಾಲಕ, ಬಸ್‌ನ್ನು ನಿಯಂತ್ರಿಸಿ ರಸ್ತೆ ಬಲಭಾಗದಲ್ಲಿದ್ದ ಮರಕ್ಕೆ ತಾಗುವಂತೆ ನಿಲ್ಲಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ. ಇಲ್ಲವಾದಲ್ಲಿ ಬಸ್ ರಸ್ತೆಯಿಂದ ಕೆಳಕ್ಕೆ ಬೀಳುವ ಸಾಧ್ಯತೆ ಇದ್ದು, ಭಾರೀ ಪ್ರಾಣಾಪಾಯ ಸಂಭವಿಸಬಹುದಿತ್ತು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅವಘಡಕ್ಕೆ ಒಳಗಾದ ಅನ್ನಪೂರ್ಣೇಶ್ವರಿ ಬಸ್‌ವು ಸಾರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರವೇ ಕಾರ್ಯನಿರ್ವಹಿಸುತ್ತಿತ್ತು. ಬಸ್‌ನಲ್ಲಿ ಎರಡು ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳನ್ನು ಅಳವಡಿಸಲಾಗಿದ್ದು, ಅದರಿಂದ ಪ್ರಯಾಣಿಕರನ್ನು ತ್ವರಿತವಾಗಿ ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಗಿದೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟನೆಯ ಕುರಿತು ಮುಂದಿನ ತಾಂತ್ರಿಕ ತನಿಖೆ ಮುಂದುವರಿಯಲಿದ್ದು, ಬಸ್ ಮಾಲೀಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

About The Author