ಡಿಜಿಟಲ್ ಅರೆಸ್ಟ್ – ಮಹಿಳೆಗೆ 3.16 ಕೋಟಿ ರೂ. ವಂಚನೆ

ಡಿಜಿಟಲ್ ಅರೆಸ್ಟ್ – ಮಹಿಳೆಗೆ 3.16 ಕೋಟಿ ರೂ. ವಂಚನೆ

ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಯೊಬ್ಬರಿಗೆ ಬರೋಬ್ಬರಿ 3.16 ಕೋಟಿ ರೂ. ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆಗೊಳಗಾದ 40 ವರ್ಷದ ಮಹಿಳೆ, ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್(ಸಿಇಎನ್) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಜೂನ್ 6 ರಂದು ವಂಚಕರು ತಾವು ನ್ಯಾಷನಲ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್(ಎನ್‌ಸಿಆರ್‌ಪಿ) ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಗೆ ಕರೆ ಮಾಡಿದ್ದಾರೆ. ನಿಮ್ಮ ಗಂಡನ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ ಅನ್ನು “ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ” ಎಂದು ಹೆದರಿಸಿದ್ದಾರೆ.

ಕರೆಯನ್ನು ಹಲವು ಬಾರಿ ವರ್ಗಾಯಿಸಲಾಯಿತು. ನಂತರ ಕರೆಯನ್ನು ಸಹಾರ್ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ಹೇಳಿದ್ದರು. ಆ ಬಳಿಕ ಅಲ್ಲಿನ ಸಬ್ ಇನ್ಸ್‌ಪೆಕ್ಟರ್ ತಾನು ಎಂದು ಮೋಹನ್ ಕುಮಾರ್ ಎಂಬಾತ ಮಾತನಾಡಿ, ಮಹಿಳೆಯ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದನು. ಆ ಬಳಿಕ ಕರೆಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ದೀಪಕ್ ವೆಂಕಟರಮಣ ಎಂಬಾತನಿಗೆ ವರ್ಗಾಯಿಸುವುದಾಗಿ ಹೇಳಿದ್ದಾನೆ. ಬಳಿಕ ದೀಪಕ್​ ಎಂಬ ಹೆಸರಿನ ವ್ಯಕ್ತಿ ಮಹಿಳೆಯ ಮತ್ತು ಅವರ ಗಂಡನ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿದ್ದಾನೆ.

ಈ ವ್ಯಕ್ತಿಗಳು, ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಪಾವತಿಸಿದ ಎಲ್ಲಾ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ವಿಷಯವನ್ನು ಯಾರಿಗೂ ತಿಳಿಸದಂತೆ ಹೇಳಿದ್ದಾರೆ. ಮಹಿಳೆಯನ್ನು ಭೀತಿಗೊಳಿಸಿದ್ದರಿಂದ ಅವರು ಯಾರೊಂದಿಗೂ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

ಜೂನ್ 10ರಿಂದ ಜೂನ್ 27ರವರೆಗೆ, ಮಹಿಳೆ ಮತ್ತು ಅವರ ಗಂಡನ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಒಟ್ಟು 3,16,52,142 ರೂಪಾಯಿಗಳನ್ನು ವಂಚಕರು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ವರ್ಗಾಯಿಸಿದ್ದಾರೆ. ನಂತರ, ವಂಚಕರು ಯಾವುದೇ ಸಂಪರ್ಕಕ್ಕೆ ಸ್ಪಂದಿಸದೇ, ಕರೆಗಳನ್ನು ಬ್ಲಾಕ್ ಮಾಡಿದ್ದಾರೆ.

ಮಹಿಳೆ ಭಯಗೊಂಡು ತಮ್ಮ ಮಕ್ಕಳಿಗೆ ಈ ವಿಷಯವನ್ನು ತಿಳಿಸಿದಾಗ, ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಪ್ರಕರಣ  ದಾಖಲಾಗಿದೆ.