ಭೂತ ಬಿಡಿಸಲು ಮಹಿಳೆಗೆ ಕೋಲಿನಿಂದ ಹೊಡೆತ – ಏಟು ತಾಳಲಾಗದೇ ಮಹಿಳೆ ಸಾವು

ಭೂತ ಬಿಡಿಸಲು ಮಹಿಳೆಗೆ ಕೋಲಿನಿಂದ ಹೊಡೆತ – ಏಟು ತಾಳಲಾಗದೇ ಮಹಿಳೆ ಸಾವು

ರಾಜ್ಯದಲ್ಲಿ ಮೂಢ ನಂಬಿಕೆಗೆ ಮತ್ತೊಬ್ಬ ಮಹಿಳೆ ಬಲಿ ಆಗಿದ್ದಾರೆ. ‘ದೆವ್ವ ಬಿಡಿಸುವ’ ಪ್ರಯತ್ನದ ನಡುವೆ 45 ವರ್ಷದ ಮಹಿಳೆ, ಕೋಲುಗಳಿಂದ ಬೀಳುತ್ತಿದ್ದ ನಿರಂತರ ಏಟುಗಳನ್ನು ತಾಳಲಾಗದೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸ ಜಂಬರಘಟ್ಟದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಹಳೆ ಜಂಬರಘಟ್ಟ ನಿವಾಸಿ ಗೀತಾ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಶಾಂತಮ್ಮ ಎಂಬ ಮಹಿಳೆ ಗೀತಾಳ ಮೈ ಮೇಲೆ ‘ದೆವ್ವ ಬರುತ್ತದೆ. ಅವಳಿಗೆ ದೆವ್ವ ಹಿಡಿದಿದೆ’ ಎಂಬ ಮೂಢ ನಂಬಿಕೆಯನ್ನು ಹೊಂಡಿದ್ದಳು. ಹೀಗಾಗಿ ದೆವ್ವ ಬಿಡಿಸುವ ನಿಟ್ಟಿನಲ್ಲಿ ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ದೆವ್ವ ಬಿಡಿಸುವ ಪ್ರಹಸನದ ವೇಳೆ ಗೀತಾಳಿಗೆ ನಿರಂತರವಾಗಿ ಕೋಲಿನಿಂದ ಹೊಡೆಯಲಾಗಿದೆ. ಗೀತಾ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಹಿಳೆಯ ಸಾವಿನ ನಂತರ ಗ್ರಾಮದಲ್ಲಿ ಪಂಚಾಯತಿ ನಡೆದಿದ್ದು, ಇದು ವಿಫಲವಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಗೀತಾಳ ಮೃತದೇಹವನ್ನು ಹೊಳೆಹೊನ್ನೂರು ಸಮುದಾಯ ಭವನದಲ್ಲಿ ಇಡಲಾಗಿದ್ದು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.