ಹೊಸನಗರಕ್ಕೆ ಪ್ರವಾಸ ಹೊರಟಿದ್ದ ಕಾರು ಅಪಘಾತ – ಯುವ ವೈದ್ಯೆ ಸಾವು
ಶಿವಮೊಗ್ಗ : ಕಾರು ಅಪಘಾತದಲ್ಲಿ ಗಾಯಗೊಂಡು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯೆಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂ. 19 ರ ಮುಂಜಾನೆ ನಡೆದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಸನಾ ರಾಬಿಯಾ ಕೌಸರ್ (22) ಮೃತಪಟ್ಟ ಯುವ ವೈದ್ಯೆ ಎಂದು ಗುರುತಿಸಲಾಗಿದೆ.ಇತ್ತೀಚೆಗೆ ಇವರು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದು, ಸಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಇಂಟರ್ನ್’ಶಿಪ್ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಹಿನ್ನೆಲೆ :
ಜೂನ್ 15 ರ ಮಧ್ಯಾಹ್ನ ಎರ್ಟಿಗಾ ಕಾರಿನಲ್ಲಿ ಸುಮಾರು ಐದಾರು ಜನರಿದ್ದ ಯುವ ವೈದ್ಯರ ತಂಡ, ಹೊಸನಗರದ ಪ್ರವಾಸಿ ತಾಣಕ್ಕೆ ತೆರಳುತ್ತಿತ್ತು. ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಬಳಿ, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು.
ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಸನಾ ರಾಬಿಯಾ ಕೌಸರ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.