ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ
ತೀರ್ಥಹಳ್ಳಿ : ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದೋ ಅದಕ್ಕಿಂತ ಜಾಸ್ತಿ ಹಾಳಾಗುವುದೇ ಹೆಚ್ಚು. ಅದರಲ್ಲೂ ಈಗ ರೀಲ್ಸ್ ಎಂಬ ಶೋಕಿ ಕೆಲವರಿಗೆ ಹುಚ್ಚಾಟವಾಗಿದೆ.
ತೀರ್ಥಹಳ್ಳಿಯಲ್ಲಿ ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಬೈಕ್ ಸುತ್ತು ಹೊಡೆಯುತ್ತಿದ್ದು ಅದರ ಮಧ್ಯೆ ಓರ್ವ ಯುವಕ ಡ್ಯಾನ್ಸ್ ಮಾಡುತ್ತಿರುವ ರೀಲ್ಸ್ ತುಂಗಾ ಸೇತುವೆ ಮೇಲೆ ಮಾಡಲಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಒಬ್ಬ ರೀಲ್ಸ್ ಮಾಡಿದರೆ ನಾಳೆಯಿಂದ ಪ್ರತಿಯೊಬ್ಬರು ಹೀಗೆ ಸೇತುವೆ ಮೇಲೆ ರೀಲ್ಸ್ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಅದರಲ್ಲೂ ಹೊಸ ಸೇತುವೆ ಮೇಲೆ ಸಿಗರೇಟ್, ಎಣ್ಣೆ ಹೊಡೆದುಕೊಂಡು ಯುವಕರು ಅಸಭ್ಯ ವರ್ತನೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಕುಡಿದ ಖಾಲಿ ಬಾಟಲ್ ಗಳನ್ನು ಒಡೆದು ನದಿಗೆ ಎಸೆಯುವುದು ಮಾಡುತ್ತಾರೆ, ರಸ್ತೆಯಲ್ಲಿ ಓಡಾಡುವ ಮಹಿಳೆಯರಿಗೆ ಚುಡಾಯಿಸುವುದು ಮಾಡುತ್ತಾರೆ ಎಂಬ ದೂರು ಸಾರ್ವಜನಿಕ ರಿಂದ ಕೇಳಿ ಬರುತ್ತಿದೆ. ಹೊಸ ಸೇತುವೆ ಮೇಲೆ ವಾಕಿಂಗ್ ಮಾಡುವವರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನವಹಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಒಟ್ಟಿನಲ್ಲಿ ರೀಲ್ಸ್ ಶೋಕಿಯಿಂದ ಸಾರ್ವಜನಿಕ ಆಸ್ತಿ ಎಂಬುದನ್ನು ತಿಳಿಯದೆ ಮೋಜು ಮಸ್ತಿ ಮಾಡುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.
– ಅಕ್ಷಯ್ ಕುಮಾರ್ , ತೀರ್ಥಹಳ್ಳಿ