Headlines

ಜನಸ್ನೇಹಿ ದಕ್ಷ ಪೋಲಿಸ್‌ ಅಧಿಕಾರಿ ಪಿಎಸ್ ಐ ಪ್ರವೀಣ್ ಎಸ್ ಪಿ

ಜನಸ್ನೇಹಿ ದಕ್ಷ ಪೋಲಿಸ್‌ ಅಧಿಕಾರಿ ಪಿಎಸ್ ಐ ಪ್ರವೀಣ್ ಎಸ್ ಪಿ

ರಿಪ್ಪನ್ ಪೇಟೆ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್‍ಐ ಪ್ರವೀಣ್ ಮಾದರಿ ಅಧಿಕಾರಿಯಾಗಿದ್ದಾರೆ.

ಹೌದು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದ ಮಾರಿಗುಡ್ಡ ನಿವಾಸಿಯಾಗಿರುವ ಪ್ರವೀಣ್ ಎಸ್ ಪಿ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸುಧೀರ್ಘವಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿಗೊಂಡ ಇವರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪಿಎಸ್ ಐ ಆಗಿ ಪ್ರಪ್ರಥಮವಾಗಿ ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ತಮ್ಮ ನಾಗರೀಕ ಸೇವೆ ಆರಂಭಿಸಿ ಜೂನ್ 16 , 2023 ರಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ವರ್ಗಾವಣೆಯಾಗಿದ್ದರು.ಈಗ ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಸನ್ನಡತೆಯ, ಸರಳ ಸ್ವಭಾವದ, ದಕ್ಷ, ಪ್ರಾಮಾಣಿಕ ಹಾಗೂ ಜನಸ್ನೇಹಿ ಅಧಿಕಾರಿಯಾಗಿರುವ ಪ್ರವೀಣ್ ಎಸ್ ಪಿ ಅವರು ಪಟ್ಟಣದಲ್ಲಿ ಅಧಿಕಾರ ವಹಿಸಿಕೊಳ್ಳುತಿದ್ದಂತೆಯೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳತ್ತ ಗಮಹರಿಸಿದ್ದಾರೆ. ದಿನಾಂಕ 25-06-2023 ರಂದು ಜಿಲ್ಲಾ ಪೊಲೀಸ್ ,ಮೆಗ್ಗಾನ್ ರಕ್ತಕೇಂದ್ರ ಹಾಗೂ ಪಟ್ಟಣದ ಪೊಲೀಸ್ ಠಾಣೆ ಸಹಯೋಗದೊಂದಿಗೆ ಭಾನುವಾರ ನಂದಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ರಕ್ತದಾನದ ಮಹತ್ವವವನ್ನು ಸಾರಿದ್ದಾರೆ.

08-06-2023 ರಂದು ಗರ್ತಿಕೆರೆ ಬಳಿಯ ಗಂದ್ರಳ್ಳಿ ಗ್ರಾಮದ ಗೋವಿಂದನಾಯ್ಕ್ ಮನೆಯ ಕಳ್ಳತನವಾಗಿತ್ತು ಈ ಪ್ರಕರಣದ ಬೆನ್ನತ್ತಿದ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಮಿಂಚಿನ ಕಾರ್ಯಾಚರಣೆಯ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ ಕಳುವಾದ ಮಾಲನ್ನು ವಶಪಡಿಸಿಕೊಂಡಿದ್ದರು.

ಮಲೆನಾಡಿನಾದ್ಯಂತ ರೈತರಿಗೆ ತಲೆ ನೋವಾಗಿ ಸಂಚಲನ ಮೂಡಿಸಿದ್ದ ಅಡಿಕೆ ಹಾಗೂ ರಬ್ಬರ್ ಕಳ್ಳರ ಗ್ಯಾಂಗ್ ನ ಪ್ರಕರಣವನ್ನು ಚಾಕಚಕ್ಯತೆಯಿಂದ ನಿಭಾಯಿಸಿ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನೀಕರಿಂದ ಪ್ರಶಂಸೆಗೆ ಪಾತ್ರವಾಗಿದ್ದರು.

ಪ್ರವೀಣ್ ಎಸ್ ಪಿ ಪ್ರಮುಖವಾಗಿ ಠಾಣೆಯಲ್ಲಿ ಸಿಬ್ಬಂದಿಗಳಿಗೆ ಎಲ್ಲ ರೀತಿಯಿಂದಲೂ ಸಹಕರಿಸುವುದು, ಠಾಣೆಗೆ ಸಣ್ಣವರೇ ಬರಲಿ ದೊಡ್ಡವರೇ ಇರಲಿ ಗೌರವಯುತವಾಗಿ ಮಾತನಾಡುವುದು, ಬಡವರ ಬಗ್ಗೆ ಕಾಳಜಿ ಹೀಗೆ ತಮ್ಮ ವೃತ್ತಿಯನ್ನು ಯಾವುದೇ ಅಹಃಭಾವ ಇಲ್ಲದೇ ಅತ್ಯಂತ ಶೃದ್ದೆಯಿಂದ ನಿಭಾಯಿಸುವುದೇ ಅವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನೂ ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ನಡೆಯುವ ಗಣಪತಿ ಹಬ್ಬ , ಬಕ್ರೀದ್ , ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಪ್ರವೀಣ್ ರವರ ಚಾಕಚಕ್ಯತೆಯಿಂದ ಸರಾಗವಾಗಿ ನಡೆದಿದೆ.ಇನ್ನೂ ಪಟ್ಟಣದ ಅತಿ ದೊಡ್ಡ ಸಂಭ್ರಮ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಯಶಸ್ವಿಯಾಗಿ ಯಾವುದೇ ಕಿಂಚಿತ್ತೂ ಅಡೆತಡೆಯಿಲ್ಲದೇ ನಡೆಸಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

ಪಟ್ಟಣದ ರಾಜಕೀಯ ಹಾಗೂ ಧಾರ್ಮಿಕ ಸಮತೋಲನ, ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ನಿರ್ದಾಕ್ಷೀಣ್ಯ ಕ್ರಮ ಅಲ್ಲದೇ ರಾಜ್ಯದಲ್ಲಿಯೇ ಕೋಮು ಸೂಕ್ಷ್ಮ ಪ್ರದೇಶ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಕೆಂಚನಾಲ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಅನೇಕ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೆಂಚನಾಲ ಗ್ರಾಮವನ್ನು ಝೀರೋ ಕ್ರೈಂ ಗ್ರಾಮ ಮಾಡಿದ ಕೀರ್ತಿ ಪ್ರವೀಣ್ ರವರಿಗೆ ಸಲ್ಲಬೇಕು..

ಗವಟೂರು ನಿವಾಸಿ ಆಟೋ ದೇವಪ್ಪಗೌಡ ರವರು 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದು,ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು.ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು.ಈ ಹಿನ್ನೆಲೆಯಲ್ಲಿ 16-07-2023 ರಂದು 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿದ್ದ ಗವಟೂರಿನ ಬಡ ಕುಟುಂಬದ ನೋವಿಗೆ ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಆರ್ಥಿಕವಾಗಿ ಸಹಕರಿಸುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದರು.ಹಾಗೇಯೆ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋ ಕೊಪ್ಪ ಗ್ರಾಮದ ಬಡ ಕುಟುಂಬದ ವಿಕಲಚೇತನ ಯುವತಿ  ಉಷಾ(24) ರವರಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡುವುದರ ಮೂಲಕ ಪಿಎಸ್ಐ ಪ್ರವೀಣ್ ಎಸ್ ಪಿ  ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದ್ದರು.

13-08-2023 ರಂದು ರಾಜ್ಯಾದ್ಯಂತ ಸದ್ದು ಮಾಡಿದ್ದ ತೀರ್ಥಹಳ್ಳಿಯ ಪ್ರಸಿದ್ದ ಖಾಸಗಿ ರೆಸಾರ್ಟ್ ವೊಂದರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೆತ್ತಮಕ್ಕಳನ್ನು ಬೀಕ್ಷಾಟನೆ ಮಾಡುವಂತೆ ಮಕ್ಕಳ ಕೈಗೆ ತಟ್ಟೆಕೊಟ್ಟು ಬಲತ್ಕಾರದಿಂದ ಬಿಕ್ಷೆ ಬೇಡುವಂತಹ ಪ್ರಕರಣಗಳಲ್ಲಿ ಪಿಎಸ್‌ಐ ಪ್ರವೀಣ್ ಎಸ್ ಪಿ ಪೋಷಕರುಗಳಿಗೆ ವಾರ್ನಿಂಗ್ ಕೊಟ್ಟು ಕಳಿಸಿ ಆ ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‌ಐ ಪ್ರವೀಣ್ ಎಸ್ ಪಿ ರವರ ಕಾರ್ಯವೈಖರಿ ಹಾಗೂ ಶೀಘ್ರ ಕಡತ ವಿಲೇವಾರಿಯನ್ನು ಮೆಚ್ಚಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ 06-1-2024 ರಂದು ಶಿವಮೊಗ್ಗದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆರ್ ಹಿತೇಂದ್ರ IPS ಅವರು ಪ್ರಶಂಸನಾ ಪತ್ರ ವಿತರಿಸಿ ಇಲಾಖಾ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವುದನ್ನು ಶ್ಲಾಘಿಸಿದ್ದಾರೆ.

ರಿಪ್ಪನ್‌ಪೇಟೆ ಪಟ್ಟಣದ ಹಳೇ ಸಂತೆ ಮಾರುಕಟ್ಟೆ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗ 26-01-2024 ರಂದು ಆಯೋಜಿಸಿದ್ದ “ಸರ್ಕಾರಿ ಶಾಲೆ ಅಭಿಮಾನ – ಸುಣ್ಣ ಬಣ್ಣ  ಅಭಿಯಾನದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಶಾಲೆಯ ಸುತ್ತಮುತ್ತಲಿನ ಪರಿಸರ ಸ್ವಚ್ಚಗೊಳಿಸಿ ಹಾಗೂ ಪಾಚಿಗಟ್ಟಿದ್ದ ಕಾಂಪೌಡ್ ನ್ನು ಶುದ್ದಗೊಳಿಸಿ ಶ್ರಮದಾನ ನೆರವೇರಿಸಿ ಠಾಣೆಯ ವತಿಯಿಂದ ಆರ್ಥಿಕ ನೆರವು ನೀಡುವ ಮೂಲಕ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದ್ದು ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗಿತ್ತು.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಡೂರು ತಿರುವು ಅಪಘಾತಗಳಿಗೆ ಹೆಸರು ವಾಸಿ.ಈ ಸ್ಥಳದಲ್ಲಿ ಒಂದಿಲ್ಲೊಂದು ಅಪಘಾತ ನಡೆಯುತ್ತಲೇ ಇತ್ತು.ಅದೆಷ್ಟೋ ಕುಟುಂಬಗಳು ಅನಾಥವಾಗಿತ್ತು.ಈ ದಿಸೆಯಲ್ಲಿ ಅಪಘಾತ ತಡೆಯಲು ಪಿಎಸ್‌ಐ ಪ್ರವೀಣ್ ಎಸ್ ಪಿ ವಿಶಿಷ್ಟ ರೀತಿಯಲ್ಲಿ ಕಾರ್ಯೋನ್ಮುಖರಾಗಿ ದಿನಾಂಕ 07-08-2024 ರಂದು ಅಪಘಾತ ವಲಯಗಳಲ್ಲಿ ರಿಫ್ಲೆಕ್ಟರ್ ರೇಡಿಯಂ, ಸೂಚನಾ ಫಲಕವನ್ನು, ಅಳವಡಿಸಿದ್ದರು.ಆ ನಂತರದಲ್ಲಿ ಆ ವಲಯದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಅಪಘಾತವಾಗಿರುವ ಬಗ್ಗೆ ವರದಿಯಾಗಿಲ್ಲ .. ಇದಲ್ಲವೇ ನಿಜವಾದ ಜಾಗೃತಿ ಕಾರ್ಯಕ್ರಮ..!! ಇತ್ತೀಚೆಗೆ ಇದೇ ಮಾದರಿಯಲ್ಲಿ ಕೋಡೂರು ವ್ಯಾಪ್ತಿಯ ಅಪಘಾತ ವಲಯದಲ್ಲಿ ರಿಫ್ಲೆಕ್ಟರ್ ರೇಡಿಯಂ, ಸೂಚನಾ ಫಲಕವನ್ನು, ಅಳವಡಿಸುವ ಮೂಲಕ ವಾಹನ ಸವಾರರಲ್ಲಿ ಜಾಗೃತಿ‌ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಪಟ್ಟಣದ ಬರುವೆ ಗ್ರಾಮದ ಗ್ರಾಪಂ ಬಡಾವಣೆಯಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಇಬ್ಬರು ಪುಟ್ಟ ಮಕ್ಕಳ ಬಡ ಕುಟುಂಬದ ನೋವಿಗೆ ಪಿಎಸ್‌ಐ ಪ್ರವೀಣ್ ಸ್ಪಂದಿಸುವ ಮೂಲಕ ಆರ್ಥಿಕ ನೆರವು ನೀಡಿ ಪೋಸ್ಟ್ ಮ್ಯಾನ್ ನ್ಯೂಸ್ ನ ಸಹಕಾರದೊಂದಿಗೆ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಇನ್ನೂ ಇವರ ಸೇವಾವಧಿಯಲ್ಲಿ ಹಲವಾರು ದನಗಳ್ಳತನ ಪ್ರಕರಣ , ಮನೆ , ಬೈಕ್ , ರಬ್ಬರ್ ಹಾಗೂ ಅಡಿಕೆ ಕಳ್ಳತನ ಪ್ರಕರಣಗಳನ್ನು ಭೇಧಿಸುವ ಮೂಲಕ ಕಳ್ಳರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು..ಇನ್ನೂ ಅಕ್ರಮ ಮದ್ಯ ಮಾರಾಟಗಾರರಿಗೆ ಸಿಂಹಸ್ವಪ್ನವಾಗಿದ್ದ ಪಿಎಸ್‌ಐ ಪ್ರವೀಣ್ ಮದ್ಯ ಮಾರಾಟದ ನೂರಾರು ಕೇಸ್ ನ್ನು ದಾಖಲಿಸಿದ್ದಾರೆ.ಇನ್ನೂ ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟಲು ಇವರ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಗಾಂಜಾ ವ್ಯಸನಿಗಳ ದುಶ್ಚಟವನ್ನು ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ…

ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಆನಂದಪುರ ಠಾಣೆಗೆ ವರ್ಗಾವಣೆಯಾಗಿದ್ದು ಅಲ್ಲಿಯೂ ಇದೇ ರೀತಿ ಜನಸ್ನೇಹಿ ಅಧಿಕಾರಿಯಾಗಿ ಸರ್ಕಾರಿ ಕೆಲಸ ನಿರ್ವಹಿಸಲಿ ಅವರ ಸೇವೆಯ ಅವಕಾಶ ರಿಪ್ಪನ್ ಪೇಟೆ ಜನತೆಗೆ ಮತ್ತೊಮ್ಮೆ ಸಿಗಲಿ ಎನ್ನುವುದೇ ಸಾರ್ವಜನಿಕರ ಆಶಯ…..

— ರಫ಼ಿ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *