ಎಸ್ ಪಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರಿಂದ ಅಮ್ಮನಘಟ್ಟ ಗುಡ್ಡಕ್ಕೆ ಚಾರಣ (ಟ್ರೆಕ್ಕಿಂಗ್)
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟ ಗುಡ್ಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರು ಚಾರಣ(ಟ್ರೆಕ್ಕಿಂಗ್) ಮಾಡುವ ಮೂಲಕ ಜೇನುಕಲ್ಲಮ್ಮ ದೇವಿ ಆಶೀರ್ವಾದ ಪಡೆದರು.

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಪಕ್ಕದಲ್ಲಿರುವ ದೇವಿಯ ಮೂಲ ಸ್ಥಾನವಿರುವ ಗುಡ್ಡಕ್ಕೆ ಪೊಲೀಸ್ ಸಿಬ್ಬಂದಿಗಳು ಚಾರಣ ( ಟ್ರೆಕ್ಕಿಂಗ್) ಮೂಲಕ ಸಾಗಿ ಮೂಲ ದೇವಸ್ಥಾನದ ದರ್ಶನ ಪಡೆದು ಆ ನಂತರ ಶ್ರೀ ಜೇನುಕಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನಾಶೀರ್ವಾದ ಪಡೆದರು.

ಸೋಮವಾರ ಬೆಳ್ಳಂಬೆಳಗ್ಗೆ ಎಸ್ ಪಿ ಮಿಥುನ್ ಕುಮಾರ್ ಹಾಗೂ ಹೆಚ್ಚುವರಿ ಎಸ್ ಪಿ ಕಾರಿಯಪ್ಪ ನೇತ್ರತ್ವದಲ್ಲಿ ಆರು ಜನ ಇನ್ಸ್ ಪೆಕ್ಟರ್ ಗಳು ಹಾಗೂ ಹತ್ತು ಜನ ಸಬ್ ಇನ್ಸ್ ಪೆಕ್ಟರ್ ಗಳು ಮತ್ತು ಸಿಬ್ಬಂದಿಗಳು ಚಾರಣ ಪ್ರಕ್ರೀಯೆಯಲ್ಲಿ ಪಾಲ್ಗೊಂಡಿದ್ದರು.

ಚಾರಣ ಕೈಗೊಂಡು ತಾಯಿಯ ಆಶೀರ್ವಾದ ಪಡೆದ ಪೊಲೀಸ್ ಅಧಿಕಾರಿಗಳಿಗೆ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಜೇನುಕಲ್ಲಮ್ಮ ದೇವಸ್ಥಾನ :
ಜೇನುಕಲ್ಲಮ್ಮ ದೇವತೆಗೆ ಅರ್ಪಿತವಾದ ಇಲ್ಲಿನ ದೇವಾಲಯವು ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ.
ಪುರಾಣಗಳ ಪ್ರಕಾರ ಈ ಬೃಹತ್ ಬಂಡೆಯನ್ನು ಜೇನುಕಲ್ಲಮ್ಮ ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇಲ್ಲಿ ಜೇನುನೊಣಗಳ ಹಿಂಡುಗಳು ಗೂಡು ಕಟ್ಟುತ್ತಿದ್ದವು. ಕಳೆದ 400-500 ವರ್ಷಗಳಿಂದ ಈ ಬಂಡೆ ಬೆಳೆಯುತ್ತಿದೆ ಮತ್ತು ಹುಲಿಗಳು ಸಹ ಗುಹೆಗಳಲ್ಲಿ ವಾಸಿಸುತ್ತಿದ್ದವು ಎಂದು ನಂಬಲಾಗಿದೆ.ಈ ದೇವತೆಗೆ ಸಂಬಂಧಿಸಿದ ಅನೇಕ ದಂತಕಥೆಗಳು ಮತ್ತು ನಂಬಿಕೆಗಳಿವೆ. ಜೇನುನೊಣಗಳು ಶುಭ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರ ಮೇಲೆ ಎಂದಿಗೂ ದಾಳಿ ಮಾಡುವುದಿಲ್ಲ. ಹೀಗಾಗಿ, ಅವು ಯಾರ ಮೇಲಾದರೂ ದಾಳಿ ಮಾಡಿದ್ದರೆ, ಆ ವ್ಯಕ್ತಿಯು ಯಾವುದೋ ರೀತಿಯಲ್ಲಿ ಪಾಪ ಮಾಡಿ ದೇವಿಯ ಕೋಪವನ್ನು ಗಳಿಸಿದ್ದರಿಂದ ಅವು ಹಾಗೆ ಮಾಡಿದ್ದವು ಎಂದು ನಂಬಲಾಗಿತ್ತು.
ಅಮ್ಮನಘಟ್ಟ ಬೆಟ್ಟವು ದೇವರಕಾಡು ಕಾಡಿನಲ್ಲಿದೆ, ಹೊಸನಗರದಿಂದ 13 ಕಿ.ಮೀ ದೂರದಲ್ಲಿ ಮತ್ತು ಶಿವಮೊಗ್ಗದಿಂದ 52 ಕಿ.ಮೀ ದೂರದಲ್ಲಿ ಶಿವಮೊಗ್ಗ-ಕೊಲ್ಲೂರು ಹೆದ್ದಾರಿಯಲ್ಲಿದೆ. ಇದು ಕೊಡೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಶಿವಮೊಗ್ಗದಿಂದ ಕೊಲ್ಲೂರಿಗೆ ಹೋಗುವ ಬಸ್ಸುಗಳು ಕೊಡೂರಿನಲ್ಲಿ ನಿಲ್ಲುತ್ತವೆ, ಅಲ್ಲಿಂದ ಜನರು ಮೂರು-ನಾಲ್ಕು ಕಿ.ಮೀ ಪಾದಯಾತ್ರೆಯ ಮೂಲಕ ಬೆಟ್ಟವನ್ನು ತಲುಪಬಹುದು.