ಚಿಣ್ಣರಿಗೆ ಪೊಲೀಸ್ ಠಾಣೆ ಪರಿಚಯ | ಮಕ್ಕಳಿಗೆ ಪಿಎಸ್ ಐ ಪ್ರವೀಣ್ ಎಸ್ ಪಿ ಪಾಠ –
ರಿಪ್ಪನ್ ಪೇಟೆ : ಜನಸ್ನೇಹಿಯಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಪೊಲೀಸ್ ಇಲಾಖೆ ಮಕ್ಕಳಿಗೂ ಆಪ್ತವೆನಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ರಿಪ್ಪನ್ ಪೇಟೆ ಠಾಣೆಯ ಪಿಎಸ್ ಐ ಪ್ರವೀಣ್ ಎಸ್ ಪಿ ಮಕ್ಕಳಿಗೆ ಪೊಲೀಸರ ಕರ್ತವ್ಯ, ಜವಾಬ್ದಾರಿ, ಕಾನೂನು ಮತ್ತಿತರ ವಿಷಯಗಳ ಬಗ್ಗೆ ಪಾಠ ಮಾಡಿದ್ದಾರೆ.
ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಕುವೆಂಪು ಸಭಾಂಗಣದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಹಮ್ಮಿಕೊಂಡಿದೆ. ಇಂದು ಮಕ್ಕಳಲ್ಲಿ ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಪೊಲೀಸ್ ಠಾಣೆಗೆ ಮಕ್ಕಳನ್ನು ಕರೆಸಿ ಶಾಲಾ ಮಕ್ಕಳೊಂದಿಗೆ ಪಿಎಸ್ ಐ ಪ್ರವೀಣ್ ಎಸ್ ಪಿ ವಿಷಯ ವಿನಿಮಯ ಮಾಡಿಕೊಂಡಿದ್ದಾರೆ. ಪೊಲೀಸರೆಂದರೆ ಭಯ ಬೇಡ, ಸಾರ್ವಜನಿಕರ ಸಹಕಾರಿಂದ ಕಾನೂನು ರಕ್ಷಣೆ ಮಾಡಲು ಸಾಧ್ಯ. ಇದರಲ್ಲಿ ಮಕ್ಕಳು ಹೊರತಾಗಿಲ್ಲ, ಅನಾವಶ್ಯಕವಾಗಿ ಪೊಲೀಸರ ಮೇಲೆ ತಪ್ಪು ಕಲ್ಪನೆಯ ಮನೋಭಾವನೆ ಬೆಳೆಸಿಕೊಳ್ಳಬೇಡಿ ಎಂದರು.
ಮಕ್ಕಳಲ್ಲಿ ಪೊಲೀಸರೆಂದರೆ ಸಾಮಾನ್ಯವಾಗಿ ಭಯವಿರುತ್ತದೆ, ಇಂಥ ಭಯ ಹೋಗಲಾಡಿಸಿ, ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ರಕ್ಷಣೆಯ ಅವಶ್ಯಕತೆ ಇದ್ದಾಗ ಪೊಲೀಸರ ಸಹಾಯಪಡೆಯಲು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಇಲಾಖೆ ಸದಾ ಕಾಲ ಸನ್ನದ್ಧವಾಗಿರುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿ ಕಾನೂನು ಜಾಗೃತಿ:
ಸಂಚಾರ ನಿಯಮಗಳ ಪಾಲನೆ, ಅವುಗಳ ಉಲ್ಲಂನೆಯಿಂದ ಎದುರಿಸಬೇಕಾದ ದಂಡ ಹಾಗೂ ಶಿಕ್ಷೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಸರಗಳವು, ಸೈಬರ್ ಕೆಂ ಮತ್ತಿತರ ವಿಚಾರಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಪೊಲೀಸರು ತಿಳಿಸಿದರು. ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಗುರಿಯಿಟ್ಟುಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು, ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು ತಮ್ಮ ಪಾಲಕರಿಗೂ ಈ ಬಗ್ಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ಆಸೀಪ್ ಭಾಷಾ , ಗ್ರಂಥಾಲಯ ಮೇಲ್ವಿಚಾರಕಿ , ಪೊಲೀಸ್ ಸಿಬ್ಬಂದಿಗಳು ಇದ್ದರು.