ಪಿಯುಸಿ ಪರೀಕ್ಷೆಯಲ್ಲಿ ಮಗನ ಸಾಧನೆ ಸಂಭ್ರಮಿಸಲು ಕಾಶ್ಮೀರಕ್ಕೆ ಪ್ರವಾಸ: ಭೇಲ್ ಪೂರಿ ತಿನ್ನುವಾಗಲೇ ದಾಳಿ ನಡೆಸಿದ ಉಗ್ರರು
ಈಚೆಗಷ್ಟೇ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಪುತ್ರ ಅಭಿಜಯ ವಾಣಿಜ್ಯ ವಿಭಾಗದಲ್ಲಿ ಶೇ 98 ಅಂಕ ಗಳಿಸಿದ್ದ. ಆ ಖುಷಿಗೆ ಕುಟುಂಬವನ್ನು ಕಾಶ್ಮೀರ ಪ್ರವಾಸಕ್ಕೆ ಕರೆದೊಯ್ದಿದ್ದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ (47) ಮಂಗಳವಾರ ಪಹಲ್‌ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಮಂಜುನಾಥ ರಾವ್, ಇಲ್ಲಿನ ವಿಜಯನಗರ ಬಡಾವಣೆಯ ಮೂರನೇ ಕ್ರಾಸ್ ನಿವಾಸಿ. ಶಿವಮೊಗ್ಗದ ವಿದ್ಯಾಭಾರತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪುತ್ರನ ಫಲಿತಾಂಶ ಬಂದ ನಾಲ್ಕು ದಿನಕ್ಕೆ (ಏ.19) ಕುಟುಂಬ ಸಮೇತ ಕಾಶ್ಮೀರಕ್ಕೆ ತೆರಳಿದ್ದರು. ಏ.24ರಂದು ಕುಟುಂಬ ಶಿವಮೊಗ್ಗಕ್ಕೆ ವಾಪಸ್ ಬರಬೇಕಿತ್ತು.
ಇವರ ಪತ್ನಿ ಪಲ್ಲವಿ ಮ್ಯಾಮ್ಕೋಸ್‌ನ ಬೀರೂರು ಶಾಖೆಯಲ್ಲಿ ವ್ಯವಸ್ಥಾಪಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಮಹಾಬಲ ರಾವ್ ನಿಧನರಾಗಿದ್ದು, ತಾಯಿ ಸುಮತಿ ಹಾಗೂ ಕುಟುಂಬದೊಂದಿಗೆ ವಾಸವಿದ್ದರು. ತಾಯಿಗೆ ಪುತ್ರ ಮೃತಪಟ್ಟಿರುವ ವಿಷಯ ಗೊತ್ತಿರಲಿಲ್ಲ. ‘ನನ್ನ ಮಗನಿಗೆ ಏನೂ ಆಗಿಲ್ಲ ಅಲ್ಲವಾ? ಮಗ, ಸೊಸೆ, ಮೊಮ್ಮಗ ಸುರಕ್ಷಿತವಾಗಿ ವಾಪಸ್ ಬರುತ್ತಾರಲ್ಲವಾ? ಎಂದು ಮನೆಗೆ ಬಂದವರನ್ನು ಅವರು ಕೇಳುತ್ತಿದ್ದದ್ದು ಕಂಡುಬಂತು. ತೀರ್ಥಹಳ್ಳಿಯಲ್ಲಿದ್ದ ತಂಗಿ ವಿಷಯ ತಿಳಿದು ಆಗಷ್ಟೇ ತವರಿಗೆ ಬಂದಿದ್ದರು.
‘ಮಧ್ಯಾಹ್ನ 3.30ಕ್ಕೆ ಪಲ್ಲವಿ ಕರೆ ಮಾಡಿ, ಭೇಲ್‌ಪೂರಿ ತಿನ್ನುತ್ತಿದ್ದಾಗಲೇ ಭಯೋತ್ಪಾದಕರ ದಿಢೀರ್ ದಾಳಿ ನಡೆಯಿತು. ಪತಿ ಸಾವಿಗೀಡಾದರು ಎಂಬ ವಿಷಯ ತಿಳಿಸಿದರು. ಸಾಗರದಿಂದ ತೆರಳಿದ್ದ ಪ್ರವಾಸಿಗರ ತಂಡ ಅವರ ಜೊತೆ ಇದೆ. ಅವರೊಂದಿಗೆ ನಾವೂ ಕೂಡ ಸಂಪರ್ಕದಲ್ಲಿದ್ದೇವೆ’ ಎಂದು ಮಂಜುನಾಥ ರಾವ್ ಮನೆಗೆ ಭೇಟಿ ನೀಡಿದ್ದ ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಮಾಧ್ಯಮದವರಿಗೆ ತಿಳಿಸಿದರು.
‘ಜಮ್ಮು-ಕಾಶ್ಮೀರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಮಂಜುನಾಥ ರಾವ್ ಅವರ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ’ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದರು.
ಮಂಜುನಾಥ ರಾವ್ ನಿವಾಸಕ್ಕೆ ಶಿವಮೊಗ್ಗ ಶಾಸಕ ಎಸ್.ಎನ್ .ಚನ್ನಬಸಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದರು.
ಐಸ್ ಕ್ರೀಂ ನಮ್ಮ ಜೀವ ಉಳಿಸಿತು!
‘ದಾರಿ ಮಧ್ಯೆ ಐಸ್‌ಕ್ರೀಂ ತಿನ್ನಲು ನಮ್ಮ ತಂಡ ನಿಂತದ್ದರಿಂದ ಪಹಲ್‌ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದ ಸ್ಥಳ ತಲುಪಲು ತಡವಾಯಿತು. ಇಲ್ಲದಿದ್ದರೆ ನಾವೂ ದುರಂತಕ್ಕೆ ಸಾಕ್ಷಿ ಆಗಿರುತ್ತಿದ್ದೆವು. ದೇವರ ದಯೆಯಿಂದ ಬದುಕಿದ್ದೇವೆ’ ಎಂದು ಬೆಂಗಳೂರಿನ ನ್ಯೂ ತಿಪ್ಪಸಂದ್ರ ಬಡಾವಣೆಯ ನಿವಾಸಿ ಸುಮನಾ ಭಟ್ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದರು.
ಸುಮನಾ ಭಟ್ ಸೇರಿದಂತೆ ಟೈಮೆಕ್ಸ್ ಸಂಸ್ಥೆಯ 17 ಜನ ಉದ್ಯೋಗಿಗಳು ಜಮ್ಮುವಿಗೆ ಹೋಗಿ ಅಲ್ಲಿಂದ ಮಂಗಳವಾರ ಪಹಲ್‌ಗಾಮ್‌ಗೆ ತೆರಳಿದ್ದರು.
‘ಭಯೋತ್ಪಾದಕರ ದಾಳಿ ನಡೆದ ಸ್ಥಳವನ್ನು ನಮ್ಮ ಗೈಡ್ ಮಿನಿ ಸ್ವಿಟ್ಜರ್ಲೆಂಡ್ ಎಂದು ಬಣ್ಣಿಸಿದ್ದರು. ಹೀಗಾಗಿ ನಾವೂ ಭಾರೀ ಕೌತುಕದಿಂದಲೇ ಕುದುರೆ ಮೇಲೆ ಅಲ್ಲಿಗೆ ಹೊರಟಿದ್ದೆವು. ನಾವು ಐಸ್‌ಕ್ರೀಂ ತಿನ್ನುತ್ತಾ ನಿಂತಿದ್ದರಿಂದ ನಮ್ಮೊಂದಿಗಿದ್ದ ಬೇರೆ ಪ್ರವಾಸಿಗರು ಮುಂದೆ ಹೋಗಿದ್ದರು. ಆ ಸ್ಥಳ ಇನ್ನು ಮೂರು ಕಿ.ಮೀ ಇರುವಾಗ ಕುದುರೆಯಿಂದ ನಮ್ಮನ್ನು ಇಳಿಸಿದ ಘೋಡಾವಾಲಾಗಳು ವಾಪಸ್ ಹೋಗುವಂತೆ ಹೇಳಿ ಅವರೆಲ್ಲ ಅಲ್ಲಿಂದ ಓಡಿಹೋದರು. ನಾವು ಜೀವ ಭಯದಲ್ಲೇ ಮೂರು ಕಿ.ಮೀ ನಡೆದುಕೊಂಡು ಪಹಲ್‌ಗಾಮ್‌ನ ನಮ್ಮ ಹೋಟೆಲ್‌ಗೆ ಬಂದೆವು. ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು’ ಎಂದು ಸುಮನಾ ಭಟ್ ತಿಳಿಸಿದರು.
ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…
ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ BJP launches a month-long Seva Sankalpa Abhiyan…
ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…
ಶಿವಮೊಗ್ಗ ಲೋಕಾಯುಕ್ತ ಎಸ್‌ಪಿಯಾಗಿ ಆಂಟನಿ ಜಾನ್ ನೇಮಕ Anthony John has been appointed as the new Lokayukta…
ಕಡವೆ ಬೇಟೆ ಮಾಡಿ ಮಾಂಸ ಕತ್ತರಿಸುತ್ತಿದ್ದಾಗಲೇ ದಾಳಿ! ಮೂವರ ಬಂಧನ | 70 ಕೆ.ಜಿ. ಮಾಂಸ , ಬಂದೂಕು ಜಪ್ತಿ…
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…