RIPPONPETE | ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ ಕಳಪೆ – ಬಿಜೆಪಿ ಗಂಭೀರ ಆರೋಪ , ಪ್ರತಿಭಟನೆಯ ಎಚ್ಚರಿಕೆ
ರಿಪ್ಪನ್‌ಪೇಟೆ : ಸಾಗರ ರಸ್ತೆಯ ಎಪಿಎಂಸಿ ಯಾರ್ಡ್ ನಿಂದ ವಿನಾಯಕ ವೃತ್ತ ಮತ್ತು ತೀರ್ಥಹಳ್ಳಿ ರಸ್ತೆ ದ್ವಿ ಪಥ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ರಿಪ್ಪನ್ ಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ವಿನಾಯಕ ವೃತ್ತದ ಸತ್ಕಾರ್ ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 2022 ರಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ರವರ ವಿಶೇಷ ಆಸಕ್ತಿಯಿಂದ ದ್ವಿಪಥ ರಸ್ತೆ ಕಾಮಗಾರಿಗೆ ಸುಮಾರು 5.13 ಕೋಟಿ ರೂ ಅನುದಾನವನ್ನು ತರಲಾಗಿತ್ತು ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆ ಹಾಗೂ ಖಾಸಗಿ ವ್ಯಕ್ತಿಯ ಕಟ್ಟಡ ತೆರವು ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿ ಕುಂಟುತ್ತಾ ಸಾಗಿದ್ದು ಇನ್ನು ಸಂಪೂರ್ಣವಾಗದೇ ಪಟ್ಟಣದ ಜನತೆಗೆ ಧೂಳು ಭಾಗ್ಯ ದೊರಕಿದಂತಾಗಿದೆ.
ಈಗ ಮಾರ್ಚ್ ತಿಂಗಳ ಅಂತ್ಯದ ಹಿನ್ನಲೆಯಲ್ಲಿ ಗುತ್ತಿಗೆದಾರರು ಬಿಲ್ ಮಾಡಿಕೊಳ್ಳುವ ಉದ್ದೇಶದಿಂದ ರಸ್ತೆ ಕಾಮಗಾರಿಯನ್ನು ಬೇಕಾಬಿಟ್ಟಿ ಕಳಪೆಯಾಗಿ ಮಾಡುತಿದ್ದು ಇದನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಪುಟ್ ಪಾತ್ ನಿರ್ಮಾಣಕ್ಕಾಗಿ ಚರಂಡಿಯಿಂದ 6 ಅಡಿ ಬಿಡಬೇಕೆಂದು ಇಲ್ಲದಿದ್ದಲಿ ಜೆಸಿಬಿ ಮೂಲಕ ತೆರವುಗೊಳಿಸುವುದಾಗಿ ತಾಲೂಕ್ ಆಡಳಿತ ಹಾಗೂ ಗ್ರಾಮಾಡಳಿತ ಮೈಕ್ ನಲ್ಲಿ ಪ್ರಕಟಣೆ ಮಾಡಿದ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಬೆದರಿ ತಮ್ಮ ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ಒಡೆದು ಊರಿನ ಅಭಿವೃದ್ದಿಗೆ ಸಹಕರಿಸಿದ್ದಾರೆ ಆದರೆ ಸಾಗರ ರಸ್ತೆಯಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಈ ಪ್ರಕಟಣೆಗೆ ಕ್ಯಾರೆ ಎನ್ನದೇ ಅಸಡ್ಡೆ ತೋರುತಿದ್ದಾರೆ ಆದರೆ ಸಂಬಂಧಪಟ್ಟವರು ಈ ಬಗ್ಗೆ ನಿರ್ಲಕ್ಷ್ಯ ತೋರುತಿದ್ದು ಜನಸಾಮಾನ್ಯರಿಗೆ ಒಂದು ನ್ಯಾಯ – ಪ್ರಭಾವಿಗಳಿಗೆ ಒಂದು ನ್ಯಾಯದಂತಾಗಿದೆ. ಕೂಡಲೇ ಪ್ರಕಟಣೆಯಂತೆ ಎಲ್ಲಾ ಕಡೆ 6 ಅಡಿ ತೆರವುಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡರಾದ ಎಂ ಬಿ ಮಂಜುನಾಥ್ ಮಾತನಾಡಿ ಊರಿನ ಅಭಿವೃದ್ದಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಲಾಗುತಿದ್ದು ಗುತ್ತಿಗೆದಾರ ಬೇಕಾಬಿಟ್ಟಿ ಕಳಪೆ ಕಾಮಗಾರಿ ಮಾಡುತ್ತಿರುವುದನ್ನು ನೋಡಿಕೊಂಡಿರಲು ಸಾಧ್ಯವಿಲ್ಲ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿ , ಒಂದು ಸಮುದಾಯಕ್ಕೆ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ನೀಡಲು ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಕೆ ರಾವ್ , ಗ್ರಾಪಂ ಸದಸ್ಯರಾದ ಪಿ ರಮೇಶ್ , ಸುಂದರೇಶ್ , ಮಲ್ಲಿಕಾರ್ಜುನ್ , ಅಶ್ವಿನಿ ರವಿಶಂಕರ್ , ದೀಪಾ ಸುಧೀರ್ , ವನಮಾಲ ಪ್ರಮುಖರಾದ ಪದ್ಮಾ ಸುರೇಶ್ , ರಾಮಚಂದ್ರ ಬಳೆಗಾರ್ , ಮುರುಳಿ ಕೆರೆಹಳ್ಳಿ, ರಾಘವೇಂದ್ರ ಹಾಗೂ ಇನ್ನಿತರರಿದ್ದರು..