Headlines

ಇಂದು ಮಾಜಿ ಸಚಿವ ಹರತಾಳು ಹಾಲಪ್ಪರವರ 63ನೇ ಹುಟ್ಟುಹಬ್ಬ – ಮಾಜಿ ಸಚಿವರ ಬಗ್ಗೆ ನಿಮಗೆಷ್ಟು ಗೊತ್ತು…?? ಈ ಸುದ್ದಿ ನೋಡಿ

ಇಂದು ಮಾಜಿ ಸಚಿವ ಹರತಾಳು ಹಾಲಪ್ಪರವರ 63ನೇ ಹುಟ್ಟುಹಬ್ಬ –  ಹರತಾಳು ಹಾಲಪ್ಪ ಬಗ್ಗೆ ನಿಮಗೆಷ್ಟು ಗೊತ್ತು…?? ಈ ಸುದ್ದಿ ನೋಡಿ

ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ,ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಮಾಜಿ ಸಚಿವರಾದ ಹರತಾಳು ಹಾಲಪ್ಪ ಹೋರಾಟ, ಜನಸೇವೆ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮನೆ ಮಾತಾಗಿರುವ ರಾಜಕಾರಣಿ. 

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಗರಡಿಯಲ್ಲಿ ಬೆಳೆದು ರಾಜಕೀಯ ಪ್ರವೇಶಿಸಿ ಎದುರಾದ ಅನೇಕ ಕಷ್ಟಗಳನ್ನು ಎದುರಿಸಿ ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನಾನುರಾಗಿ. ನೇರ ನಡೆ-ನುಡಿಯ ವ್ಯಕ್ತಿತ್ವದ ಹರತಾಳು ಹಾಲಪ್ಪ ತಮ್ಮ ಹತ್ತು ಹಲವು ಚಿಂತನೆ, ಅಭಿವೃದ್ಧಿ ಕಾರ್ಯಗಳೊಂದಿಗೆ ಸೇವೆ ಸಲ್ಲಿಸಿರುವುದು ಜನಮಾನಸದಲ್ಲಿ ಅಚ್ಚಳಿಯದೇ ಕುಳಿತಿದೆ.

ಬಡವರು, ನಿರ್ಗತಿಕರು, ದೀನದಲಿತರ ಸೇವೆ ಮಾಡುವ ಯಾವುದೇ ವ್ಯಕ್ತಿಗೆ ಸಮಾಜ ಸೇವೆಯೊಂದಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಎಂತಹ ಅಡೆತಡೆಗಳನ್ನಾದರೂ ಮೆಟ್ಟಿ ನಿಂತು ಸಾಧಿಸಬಲ್ಲರು ಎಂಬುದಕ್ಕೆ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹರತಾಳು ಹಾಲಪ್ಪ ಸಾಕ್ಷಿಯಾಗಿದ್ದಾರೆ.

ಅಚ್ಚ ಮಲೆನಾಡು ತುಮರಿ ಭಾಗದ ಹೊಸಕೊಪ್ಪ ಎಂಬ ಗ್ರಾಮದಲ್ಲಿ ಸುಸಂಸ್ಕೃತ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಕೃಷಿ ಕಾಯಕ ಮಾಡುತ್ತಿದ್ದ ಹಿರಿಯನಾಯ್ಕ ಮತ್ತು ಮಂಜಮ್ಮ ಉದರದಲ್ಲಿ ಹೊಸಕೊಪ್ಪ ಹಿರಿಯನಾಯ್ಕ ಹಾಲಪ್ಪ 07-03-1961ರಲ್ಲಿ ಜನಿಸಿದ ಹರತಾಳು ಹಾಲಪ್ಪ ಸೊರಬ ತಾಲೂಕಿನ ಪಡವಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಇಲ್ಲಿಯೇ 7ನೇ ತರಗತಿ ಉತೀರ್ಣರಾದರು. ನಂತರ ಸಾಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಪ್ರವೇಶ ಪಡೆದರು.ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದರು.

ಶಾಲಾ – ಕಾಲೇಜುಗಳಲ್ಲಿ  ಓದುತ್ತಿದ್ದಾಗಲೇ ಅಲ್ಲಿನ ಅನೇಕ ರಾಜಕೀಯ ಮುಖಂಡರ ಹೋರಾಟದ ಬದುಕು ಇವರಲ್ಲಿರುವ ಸೇವೆ ಹಾಗೂ ಹೋರಾಟದ ಮನೋಭಾವವನ್ನು ಬಡಿದೆಬ್ಬಿಸಿತು. ಆ ಕಿರಿ ವಯಸ್ಸಿನಲ್ಲಿಯೇ ಸಂಘಟನೆಯಲ್ಲಿ ವಿಭಿನ್ನ ಛಾಪು ಮೂಡಿಸಿದ್ದರು.ಆ ಸಮಯದ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಸಮಾಜವಾದಿ ಚಿಂತನೆ, ಆದರ್ಶ ಹೋರಾಟಗಳು ಹಾಲಪ್ಪ ರವರ ಸಂಘಟನೆ, ಹೋರಾಟಗಳಿಗೆ ಮಾರ್ಗದರ್ಶಿ ಮತ್ತು ಪ್ರೇರಣೆಯಾಗಿದ್ದವು.

ಪ್ರಾಥಮಿಕ ವಿದ್ಯಾಭ್ಯಾಸದ ದಿನಗಳಿಂದಲೇ ಆದರ್ಶ ಗುಣಗಳ ಜೊತೆಗೆ ಸಮಾಜಸೇವೆ ಹೋರಾಟದಂತಹ ಕ್ರಾಂತಿಕಾರಿ ಮನೋಭಾವನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ನಾನೂ ಕೂಡ ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಜನಸೇವೆ ಮಾಡಬೇಕು ಎಂಬ ತಮ್ಮ ಮನದಾಳದ ಚಿಂತನೆಗೆ ಚಾಲನೆ ನೀಡಿ ರಾಜಕೀಯ ಕ್ಷೇತ್ರದಿಂದ ಜನರ ಹಲವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಲೋಚಿಸಿದರು. ಮೊದಲೇ ವಿದ್ಯಾರ್ಥಿ ಸಂಘಟನೆ, ಚಳುವಳಿಯಲ್ಲಿ ಪಾಲ್ಗೊಂಡಿದ್ದ ಹರತಾಳು ಹಾಲಪ್ಪ ತಮ್ಮ ಸಂಸ್ಕಾರ, ಸಂಸ್ಕೃತಿ, ಚಿಂತನೆಗಳಿಗೆ ಒಪ್ಪುವುದಾದರೆ ಅದು ಬಂಗಾರಪ್ಪರವರ ಗರಡಿಯಲ್ಲಿ ಸಾಧ್ಯ ಎಂದು ತೀರ್ಮಾನಿಸಿದರು.

ನಂತರ ಹರತಾಳು ಹಾಲಪ್ಪ ಹಿಂದಿರುಗಿ ನೋಡಲೇ ಇಲ್ಲ,2004 ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಅವರು ನಂತರ ಕ್ಷೇತ್ರ ಬದಲಿಸಿ 2008 ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ರಾಜಕೀಯ ಗುರುಗಳಾದ ಬಂಗಾರಪ್ಪ ರವರ ಇಬ್ಬರು ಮಕ್ಕಳನ್ನು ಸೋಲಿಸಿ ಗೆಲುವಿನ ನಗೆ ಬೀರಿ ಅಂದಿನ ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.2013 ರ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಪರಾಭವಗೊಂಡರು ಕ್ಷೇತ್ರ ಬಿಡದೇ ಜನರ ನಡುವೆ ಇದ್ದು ಕ್ಷೇತ್ರದ ಜನರ ಮನಸ್ಸನ್ನು ಗೆದ್ದಿದ್ದರು.

2018 ರಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದ ಐದು ವರ್ಷ ಅಧಿಕಾರ ಇಲ್ಲದೇಯೇ ಸೊರಬ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದ ಅವರು ಬಿಜೆಪಿ ಹೈಕಮಾಂಡ್ ಆದೇಶದಂತೆ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.ರಾಜಕೀಯ ಪಂಡಿತರು ಹೇಳುವ ಪ್ರಕಾರ ಇವರ ಸಂಘಟನೆಯೇ ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಗೆಲ್ಲಲು ಕಾರಣ ಎನ್ನುತ್ತಾರೆ.

2018 ರಲ್ಲಿ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ರಿಗೆ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ,ಬಿಜೆಪಿಯ ಪ್ರಬಲ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ ರವರು ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಗೋಡು ತಿಮ್ಮಪ್ಪ ರವರಿಗೆ ಬೆಂಬಲ ಸೂಚಿಸಿದ್ದರು. ಆದರೆ ಚುನಾವಣೆ ಚಾಣಾಕ್ಷ ಹಾಲಪ್ಪರವರು ಎಲ್ಲರ ಲೆಕ್ಕಾಚಾರ ತಲೆಗೆಳಗಾಗುವಂತೆ ಕಾಗೋಡು ತಿಮ್ಮಪ್ಪರವರ ವಿರುದ್ದ ಗೆದ್ದು ಶಾಸಕರಾಗಿ ಆಯ್ಕೆಯಾದರು.2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ವಿರುದ್ದ ಸೋಲನುಭವಿಸಿದ ನಂತರ ಹರತಾಳು ಹಾಲಪ್ಪ ನೇಪಥ್ಯಕ್ಕೆ ಸರಿಯುತ್ತಾರೆ ಅಂದುಕೊಂಡಿದ್ದ ಅವರ ವಿರೋಧಿಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಶಾಕ್ ನೀಡಿದ್ದರು.

ಮೂಲತಃ ಶರಾವತಿ ಸಂತ್ರಸ್ತರಾದ ಹಾಲಪ್ಪ ರವರು ಸಂತ್ರಸ್ತರಿಗೆ ಹಕ್ಕು ದೊರಕಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ವಿಷಯ ಮಂಡನೆ ಮಾಡಿದ ಧಾಟಿಗೆ ಸ್ವಪಕ್ಷದವರೇ ದಂಗಾಗಿ ಹೋಗಿದ್ದರು.ಮಂಗನಖಾಯಿಲೆ ಬಗ್ಗೆ ಒಮ್ಮೆ ಸದನದಲ್ಲಿ ಮಾತನಾಡುವಾಗ ಸ್ವಪಕ್ಷದ ಆರೋಗ್ಯ ಸಚಿವರಿಗೆ ಬೆವರಿಳಿಸಿದ್ದರು.ಇನ್ನೂ ಮಲೆನಾಡಿಗೆ ಕಂಟಕವಾಗಿದ್ದ ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಕಾನೂನು ಬದ್ದವಾಗಿಯೇ ಹೋರಾಟ ಮಾಡಿ ರಾಜ್ಯದಿಂದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪರಿಸರ ಸಚಿವರಿಗೆ ಪರಿಸ್ಥಿತಿ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.

ಒಟ್ಟಾರೆಯಾಗಿ ಹರತಾಳು ಹಾಲಪ್ಪ ಅಂದರೇ ಅಭಿವೃದ್ಧಿಯ ಕೆಲಸ ಅನ್ನುವ ಮಟ್ಟಿಗೆ ಅವರ ಕಾರ್ಯವೈಖರಿ. ಸರ್ಕಾರದ ಕೆಲಸದ ವಿಚಾರದಲ್ಲಿ ಅಧಿಕಾರಿಗಳ ಅಸಡ್ಡೆತನಕ್ಕೆ ಸ್ಥಳದಲ್ಲಿಯೇ ಉತ್ತರಿಸುವ ಹಾಲಪ್ಪ ಹಲವು ಬಾರಿ ತಮ್ಮದೇ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿರುವ ಹಲವು ಉದಾಹರಣೆಗಳಿವೆ.

ಇಂತಹ ಧೀಮಂತ ದಣಿವರಿಯದ ನಾಯಕ 63 ನೇ ವಸಂತಕ್ಕೆ ಕಾಲಿಡುತಿದ್ದು ಅವರ ಮುಂದಿನ ರಾಜಕೀಯ ಜೀವನ ಇನ್ನಷ್ಟೂ ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ.

✒✒✒ ರಫ಼ಿ ರಿಪ್ಪನ್ ಪೇಟೆ

ಮಾಜಿ ಸಚಿವ ಹರತಾಳು ಹಾಲಪ್ಪ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

ರಿಪ್ಪನ್‌ಪೇಟೆ : ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ರವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *