ಇಂದಿನಿಂದ (ಮಾ.19 ರಿಂದ 24 ರವರೆಗೆ) ಹೊಂಬುಜಾ ಅತಿಶಯ ಶ್ರೀಕ್ಷೇತ್ರದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ
ಚಾರಿತ್ರಿಕ ಹಿನ್ನೆಲೆಯ ಹೊಂಬುಜ ಕ್ಷೇತ್ರವಿಂದು ಧಾರ್ಮಿಕ-ಆಧ್ಯಾತ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರ ಎಂಬುದು ಜನಜನಿತವಾಗಿದೆ. ಮಲೆನಾಡಿನ ರಮ್ಯ ವಿಹಂಗಮ ಪ್ರಕೃತಿಯ ಮಡಿಲಲ್ಲಿ ಮೂಲನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಅಭೀಷ್ಠವರಪ್ರದಾಯಿನಿ ಯಕ್ಷಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಜಿನಮಂದಿರಗಳಿಗೆ 1300 ವರ್ಷಗಳ ಅಪೂರ್ವ ಇತಿಹಾಸವಿದೆ. ಕಾಲಕಾಲಕ್ಕೆ ಪೀಠಧೀಶರಾಗಿದ್ದ ಭಟ್ಟಾರಕ ಪರಂಪರೆಯ ಮಹಾಸ್ವಾಮಿಗಳವರ ಕ್ಷೇತ್ರದಲ್ಲಿ ಜೀರ್ಣೋದ್ಧಾರ, ಸಂರಕ್ಷಣೆ ಮತ್ತು ಜೈನ ಧರ್ಮ ಪ್ರಸಾರದ ಕುರಿತು ಸತ್ಕಾರ್ಯ ಯೋಜನೆಗಳನ್ನು ಸಮಾಜ ಬಾಂಧವರ ಸಹಕಾರ, ಸಹಯೋಗದಲ್ಲಿ ನೆರವೇರಿಸುತ್ತಾ ಬಂದಿರುವರು.

ಪ್ರಸ್ತುತ ಪಟ್ಟಾಚಾರ್ಯರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಪೂರ್ವ ಪರಂಪರೆಯ ಪೂಜೆ, ಆರಾಧನೆ ಮತ್ತು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸುತ್ತಿದ್ದಾರೆ. ಶ್ರೀಕ್ಷೇತ್ರ ಹೊಂಬುಜದಲ್ಲಿ ಜಿನಾಲಯಗಳ ಪುನರ್ ನಿರ್ಮಾಣ, ತ್ರಿಕೂಟ ಜಿನಾಲಯ ನಿರ್ಮಾಣ, ಸಿದ್ಧಾಂತಕೀರ್ತಿ ಗ್ರಂಥಮಾಲೆ, ಶ್ರೀ ಕುಂದಕುಂದ ವಿದ್ಯಾಪೀಠ, ಗುರುಕುಲ, ಗೋಶಾಲೆ, ಸಮಾಜ ಸೇವೆಯ ಸಾಮಾಜಿಕ ಆರೋಗ್ಯ-ಪರಿಸರ-ಕಲೆ-ಸಾಹಿತ್ಯ ಶಿಕ್ಷಣ ಕ್ಷೇತ್ರಗಳಿಗೆ ಶ್ರೀಮಠದ ವತಿಯಿಂದ ಪೂಜ್ಯಶ್ರೀಗಳವರು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
ಪೂರ್ವಪರಂಪರೆಯಂತೆ ವಾರ್ಷಿಕ ರಥಯಾತ್ರಾ ಮಹೋತ್ಸವದ ಕ್ರೋಧಿನಾಮ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಪಂಚಮಿಯಿಂದ (ಫೆ-19 ರಿಂದ ಫೆ-24ರ) ದಶಮಿಯವರೆಗೆ ನೆರವೇರಲಿದೆ.
ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಫೆ. 19ರಂದು ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಕಾ ಸಂಗ್ರಹ ವಿಧಿಗಳು ಜರುಗಿದವು. ಫೆ. 20ರಂದು ರಾತ್ರಿ ಸಿಂಹವಾಹನೋತ್ಸವ, ಫೆ. 21 ರಾತ್ರಿ ಬೆಳ್ಳಿ/ಪುಷ್ಪ ರಥೋತ್ಸವ, ಫೆ. 22 ರಂದು ಮೂಲಾನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಮಧ್ಯಾಹ್ನ 12.55 ಗಂಟೆಗೆ ರಥಾರೋಹಣ, ರಾತ್ರಿ ನಗರ ಶ್ರೀವಿಹಾರ, ಫೆ. 23ರಂದು ತ್ರಿಕೂಟ ಜಿನಾಲಯದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳ ಅಭಿಷೇಕ, ಸಂಘಪೂಜೆ, ಫೆ. 24 ರಂದು ಕುಂಕುಮೋತ್ಸವ, ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳುವುದು.
ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಸಸಂಘದದವರು 40 ವರ್ಷಗಳ ಬಳಿಕ ದರ್ಶನಾರ್ಥವಾಗಿ ಆಗಮಿಸಿರುವ ಸಂದರ್ಭದಲ್ಲಿ ವಾರ್ಷಿಕ ಮಹಾರಥೋತ್ಸವ ಜರುಗಲಿದ್ದು ಪೂಜ್ಯ ಮುನಿಶ್ರೀಗಳ ಸಾನಿಧ್ಯ ಲಭಿಸಿರುವುದು ಭಕ್ತವೃಂದದವರಿಗೆ ಸಂತಸವನ್ನುಂಟುಮಾಡಿದೆ.
ವಿಶೇಷ ಆರಾಧನೆಗಳು :
ವರ್ಷಂಪ್ರತಿ ಜರುಗುವ ರಥಯಾತ್ರಾ ಸಂದರ್ಭದಲ್ಲಿ ಫೆ.15 ಶ್ರೀಮಠದ ಬಸದಿಯಲ್ಲಿ ಶ್ರೀ ನೇಮಿನಾಥ ಸ್ವಾಮಿ ಸನ್ನಿಧಿಯಲ್ಲಿ ‘ಗಣಧರವಲಯ ಆರಾಧನೆ’, ಫೆ. 16ರಂದು ಶ್ರೀಮಕ್ಕಳ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ, ಫೆ. 17 ರಂದು ನಗರ ಜಿನಾಲಯದಲ್ಲಿ ಭಕ್ತಾಮರ ಆರಾಧನೆ, ಫೆ. 18ರಂದು ಶ್ರೀ ಬೋಗಾರ ಬಸದಿಯಲ್ಲಿ ಚೌಷಟ್ ಋದ್ಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು. ಭಕ್ತವೃಂದದವರು ಆರಾಧನೆ, ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವರು. ವಿದ್ಯುದ್ದೀಪಾಲಂಕಾರ, ಪುಷ್ಪಹಾರಗಳಿಂದ ಮಂದಿರಗಳು ಭಕ್ತರಿಗೆ ಆಕರ್ಷಣೆ.
ಫೆ.21 ರಂದು ಸಿದ್ಧಾಂತಕೀರ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ, ಸಾಹಿತಿಗಾಳಾಗಿರುವ ಪ್ರೋ. ಪದ್ಮಾಶೇಖರ್‌ರವರಿಗೆ ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನ ನೀಡುವ ‘ಸಿದ್ಧಾಂತಕೀರ್ತಿ’ ಪ್ರಶಸ್ತಿ ನೀಡಿ ಅಭಿನಂದಿಸಿ, ಗೌರವಿಸಲಾಗುವುದು.
ಜೈನ ಧರ್ಮ ಸಾಹಿತ್ಯ, ಸಂಶೋಧನೆ, ಗ್ರಂಥ ಸಂಪಾದನೆ ಹಾಗೂ ಸಂಸ್ಕೃತಿಗೆ ಸಲ್ಲಿಸಿರುವ ಸೇವೆ ಅನನ್ಯ. ಜ್ಞಾನಾಭ್ಯಾಸಿಗಳು, ಸರಳ ಸಜ್ಜನರಿಗೆ ಪ್ರತಿ ವರ್ಷ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ಶ್ರೀಕ್ಷೇತ್ರದ ವತಿಯಿಂದ ಸಿದ್ಧಾಂತಕೀರ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ.