Headlines

ಭೂಮಿಗೆ ಯಶಸ್ವಿಯಾಗಿ ಕಾಲಿಟ್ಟ ಸುನೀತಾ ವಿಲಿಯಮ್ಸ್ ..! ಫಲಿಸಿತು ಕೋಟ್ಯಾಂತರ ಮಂದಿಯ ಪ್ರಾರ್ಥನೆ!

ಭೂಮಿಗೆ ಯಶಸ್ವಿಯಾಗಿ ಕಾಲಿಟ್ಟ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್! ಫಲಿಸಿತು ಕೋಟ್ಯಾಂತರ ಮಂದಿಯ ಪ್ರಾರ್ಥನೆ!

ಇಡೀ ಜಗತ್ತೇ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಕ್ಷಣವೊಂದು ನಿರೀಕ್ಷೆಯಂತೆ ಸಕ್ಸಸ್ ಆಗಿದೆ. (Sunita Williams) 9 ತಿಂಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಕಿಯಾಗಿದ್ದ ಭಾರತ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.

ಆ ಮೂಲಕ ವಿಜ್ಞಾನಿಗಳ ಬಹುದಿನಗಳ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ನಿನ್ನೆ (ಮಂಗಳವಾರ) ನ್ಯೂಯಾರ್ಕ್ ಸಮಯ 1:05 ಕ್ಕೆ ISS ನಿಂದ ಅನ್‌ಡಾಕ್ ಮಾಡಲ್ಪಟ್ಟ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೊತೆ ಇತರ ಇಬ್ಬರು ಸಿಬ್ಬಂದಿ ಡ್ರ್ಯಾಗನ್ ಕ್ಯಾಪ್ಸುಲ್ ಒಳಗೆ ಕುಳಿತಿದ್ದರು. ಕ್ಯಾಪ್ಸುಲ್ ಬಾಹ್ಯಾಕಾಶದ ಮೂಲಕ ಪ್ರಯಾಣಿಸಿ, ಭೂಮಿಯ ವಾತಾವರಣದ ಮೂಲಕ ಧುಮುಕಿ ಅಂತಿಮವಾಗಿ ಪ್ಯಾರಾಚೂಟ್‌ಗಳ ಮೂಲಕ ಭೂಮಿಗೆ ಬಂದು ತಲುಪಿದೆ.

ನಿನ್ನೆ ನಾಸಾ ವಿಜ್ಞಾನಿಗಳು ಸ್ಥಳೀಯ ಸಮಯ ಸಂಜೆ 6 ಗಂಟೆಯ ಸುಮಾರಿಗೆ ಫ್ಲೋರಿಡಾ ಕರಾವಳಿಯ ಮೂಲಕ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೊತೆ ಇತರ ಇಬ್ಬರು ಸಿಬ್ಬಂದಿ ಭೂಮಿಗೆ ತಲುಪಲಿದ್ದಾರೆ ಎಂದು ನಿರೀಕ್ಷಿಸಿದ್ದರು. ಎಲ್ಲರೂ ಅಂದುಕೊಂಡಂತೆ ಎಲೋನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಎಂಬ ಬಾಹ್ಯಾಕಾಶ ನೌಕೆ ಬುಧವಾರ ಭಾರತೀಯ ಕಾಲಮಾನ ಬೆಳಗಿನ ಜಾವ 3:27 ರ ಸುಮಾರಿಗೆ ಯಶಸ್ವಿಯಾಗಿ ಭೂಮಿಗೆ ಬಂದಿಳಿಯಿತು.

ನಾಸಾ ಕ್ರೂ-10 ರ ಮರಳುವಿಕೆಯನ್ನು ನೇರಪ್ರಸಾರ ಮಾಡುವುದಾಗಿ ಮತ್ತು ನವೀಕರಿಸಿದ ವೇಳಾಪಟ್ಟಿಯನ್ನು ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವುದಾಗಿ ಎರಡು ದಿನಗಳ ಹಿಂದೆಯೇ ತಿಳಿಸಿತ್ತು. ಸೋಮವಾರ ಸಂಜೆಯಿಂದಲೇ ನೇರ ಪ್ರಸಾರ ಮಾಡಲಾಗಿದ್ದು, ಅವರು ಭೂಮಿಗೆ ಇಳಿಯುವ ತನಕವೂ ನೇರಪ್ರಸಾರವನ್ನು ಮಾಡಲಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ಹೋದ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಹಿಂತಿರುಗಿದ್ದಾರೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಒಂಬತ್ತು ತಿಂಗಳ ಅನಿರೀಕ್ಷಿತ ISS ವಾಸ್ತವ್ಯವು ಕೊನೆಗೊಂಡಿದ್ದು, ಇಬ್ಬರೂ ಕಳೆದ ವರ್ಷ ಜೂನ್ 2024 ರಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಮೂಲಕ ISS ತಲುಪಿದ್ದರು. ಈ ಕಾರ್ಯಾಚರಣೆಯನ್ನು ಏಳು ದಿನಗಳವರೆಗೆ ನಿಗದಿಪಡಿಸಲಾಗಿತ್ತು, ಆದರೆ ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಅವರು ಅಲ್ಲಿಯೇ ಸಿಲುಕಿಕೊಂಡರು, ಅವರನ್ನು ವಾಪಸ್ ಕರೆಸಿಕೊಳ್ಳಲು ಆಗಾಗ ಹವಾಮಾನದಲ್ಲಿ ಉಂಟಾಗುತ್ತಿದ್ದ ತೊಂದರೆಯಿಂದಾಗಿ 9 ತಿಂಗಳುಗಳ ಕಾಲ ಅಲ್ಲೇ ಉಳಿಯುವಂತಾಯಿತು.

Leave a Reply

Your email address will not be published. Required fields are marked *