Headlines

ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ

ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ

ತೀರ್ಥಹಳ್ಳಿ :ತಾಲೂಕಿನ ಕೋಣಂದೂರು ಸುತ್ತಮುತ್ತ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.
ಕೋಣಂದೂರು ಸಮೀಪದ ಗುಡ್ಡೆಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲದಿರುವುದರಿಂದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಿಂಭಾಗದ ಬಾಗಿಲಿನಿಂದ ಹೊರ ಹೋಗಿದ್ದಾರೆ. ಹಿರೇಸರದ ಮನೆಯೊಂದರಲ್ಲಿದ್ದ 75,000 ನಗದು ಹಾಗೂ ಬಂಗಾರ, ಬೆಳ್ಳಿಯನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಆಲೂರು ಹೊಸಕೊಪ್ಪದ ಉಮಾಮಹೇಶ್ವರ ದೇವಸ್ಥಾನ, ಯೋಗಿಮಳಲಿ ದೇವಸ್ಥಾನದ ಹುಂಡಿ, ಜಂಬೆ, ಹುಲ್ಲತ್ತಿ, ಹುಂಚಾ, ಕಾರ್ಕೊಡ್ಲು ಈ ಭಾಗಗಳಲ್ಲಿ ಕಳ್ಳತನ ನಡೆದಿದ್ದು, ಆಭರಣ, ನಗದು, ಚಪ್ಪರದಲ್ಲಿ ಒಣಗಿಸಿದ್ದ ಅಡಿಕೆ, ಪಾತ್ರೆಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

ಕೆಲ ದಿನಗಳ ಹಿಂದೆ ಹೊಸಕೊಪ್ಪದ ಉಮಾಮಹೇಶ್ವರ ದೇವಸ್ಥಾನದ 2 ಕಾಣಿಕೆ ಹುಂಡಿಗಳನ್ನು ಕಳ್ಳರು ಹೊತ್ತೊಯ್ದಿದ್ದರು.

ಹಣವನ್ನು ದೋಚಿಕೊಂಡು 2 ಕಿ.ಮೀ. ಅಂತರದಲ್ಲಿ ಹುಂಡಿಯನ್ನು ಬಿಸಾಡಿ ಹೋಗಿದ್ದರು. ಮಾಳೂರು ಠಾಣಾ ವ್ಯಾಪ್ತಿಯ ಯೋಗಿ ಮಳಲಿ ಈಶ್ವರ ದೇವಸ್ಥಾನದ ಸಿ.ಸಿ. ಟಿವಿ ಕ್ಯಾಮೆರಾವನ್ನು ಮುರಿದು ಕಳ್ಳತನ ಮಾಡಿದ್ದರು.

ಯೋಗಿಮಳಲಿಯಲ್ಲಿ ಒಂಟಿ ಮನೆಯೊಂದರ ಬಾಗಿಲು ಮುರಿದು ಪಾತ್ರೆ ಮತ್ತಿತರ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಕಾನುಕೊಪ್ಪದ ಮನೆಯೊಂದರಲ್ಲಿ ಆಸ್ಪತ್ರೆಗೆ ಹೋಗಲು ತಂದು ಮನೆಯಲ್ಲಿಟ್ಟುಕೊಂಡಿದ್ದ 710,000 ಹಣವನ್ನು ಕಳ್ಳರು ದೋಚಿದ್ದಾರೆ. ಮಳಲೀಮಕ್ಕಿ ಸಮೀಪದ ಕಳಸಗುಂಡಿ ಮನೆಯೊಂದರಲ್ಲಿ ಬೆಲೆಬಾಳುವ ಬಂಗಾರ, ನಗದು ದೋಚಿದ್ದಾರೆ. ಜಂಬೆ ಗ್ರಾಮದ ಮನೆಯೊಂದರ ಬೀಗವನ್ನು ಹಗಲಿನಲ್ಲೇ ಕಲ್ಲಿನಿಂದ ಒಡೆದು ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *