ಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವರ ಸಾಂತ್ವನ
ಸಂಕೂರು ಶಾಲೆ ಅಭಿವೃದ್ಧಿ: ಪುತ್ಥಳಿ ನಿರ್ಮಾಣ: ಮಧು ಬಂಗಾರಪ್ಪ
ಶಿವಮೊಗ್ಗ : ಅಗ್ರಾದಲ್ಲಿ ತರಬೇತಿ ವೇಳೆ ನಿಧನರಾಗಿದ್ದ ಭಾರತೀಯ ವಾಯುಸೇನೆಯ ಪ್ಯಾರಾಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿ ಮಂಜುನಾಥ್ ಅವರ ಹೊಸನಗರ ತಾಲೂಕು ಸಂಕೂರಿನ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ತೆರಳಿ ಯೋಧನ ಪತ್ನಿ, ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿ, ಕುಟುಂಬದ ಪ್ರಮುಖ ಶಕ್ತಿಯಾಗಿದ್ದ ಮಂಜುನಾಥ್ ಅವರ ನಿಧನದಿಂದ ಅವರ ಇಡೀ ಕುಟುಂಬ ವರ್ಗಕ್ಕೆ ಕತ್ತಲು ಅವರಿಸಿದಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನೇರವಾಗುವುದಾಗಿ ತಿಳಿಸಿದ ಅವರು, ದೇಶ ಕಾಯುವ ಪವಿತ್ರ ಕಾರ್ಯದಲ್ಲಿ ಸಕ್ರಿಯವಾಗಿದ್ದ ಮಂಜುನಾಥ್ ಅವರ ಆಕಸ್ಮಿಕ ನಿರ್ಗಮನ ಅತೀವ ದುಃಖ ತಂದಿದೆ. ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.
ಯೋಧ ಮಂಜುನಾಥ್ ಅವರು ಪ್ರಾಥಮಿಕ ವ್ಯಾಸಂಗ ಮಾಡಿದ್ದ ಸಂಕೂರಿನ ಶಾಲೆಯ ಸರ್ವಾಂಗೀಣ ವಿಕಾಸಕ್ಕೆ ಸ್ಥಳೀಯರು ಮನವಿ ಮಾಡಿಕೊಂಡಿದ್ದು, ಅವರ ಕೋರಿಕೆಯಂತೆ ಮುಂದಿನ ಒಂದು ೧೫ ದಿನಗಳೊಳಗಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಸ್ಥಳೀಯರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯೋಧನ ಪುತ್ಥಳಿ ಅನಾವರಣಗೊಳಿಸುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅನುಮತಿಗಾಗಿ ಕೊರಿದ್ದಾರೆ. ಪುತ್ಥಳಿಯ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.