ಭದ್ರಾವತಿ ಶಾಸಕರು ನಾಮಕಾವಾಸ್ತೆ, ಮಕ್ಕಳದ್ದೇ ದರ್ಬಾರು – ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ಆರೋಪ
ಶಿವಮೊಗ್ಗ : ‘ಭದ್ರಾವತಿಯಲ್ಲಿ ಅರಣ್ಯ ಕಬಳಿಕೆ, ಮರಳು, ಇಸ್ಪೀಟ್ ಹಾಗೂ ಗಾಂಜಾ ಮಾಫಿಯಾಗಳಿವೆ. ಶಾಸಕರ ಬೆಂಬಲಿತರೇ ಈ ಮಾಫಿಯಾಗಳಲ್ಲಿದ್ದಾರೆ. ಅಧಿಕಾರಿಗಳು ಶಾಸಕರ ಚೇಲಾಗಳಾಗಿದ್ದಾರೆ’ ಎಂದು ಭದ್ರಾವತಿ ಜೆಡಿಎಸ್ ಪಕ್ಷದ ನಾಯಕಿ ಶಾರದಾ ಅಪ್ಪಾಜಿಗೌಡ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಶಾಸಕರು ನಾಮಕಾವಸ್ತೆಯಾಗಿದ್ದಾರೆ. ಅವರ ಇಬ್ಬರು ಮಕ್ಕಳೇ ಆಳ್ವಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಏನಾದರೂ ದೂರು ಕೊಟ್ಟರೆ, ಎಂಎಲ್‌ಎ ಮನೆಗೆ ಹೋಗಿ ಬನ್ನಿ ಅಥವಾ ಅವರ ಮಕ್ಕಳನ್ನು ಮಾತಾಡಿಸಿಕೊಂಡು ಬನ್ನಿ ಎಂದು ಹೇಳಿ ಕಳುಹಿಸುತ್ತಾರೆ. ಶಾಸಕರು ಎಲ್ಲಿಯೂ ಕಾಣಿಸುವುದಿಲ್ಲ. ಮಕ್ಕಳು, ಅಣ್ಣತಮ್ಮಂದಿರೇ ಎಲ್ಲ ಕಡೆ ಕಾಣಿಸಿಕೊಳ್ಳುತ್ತಾರೆ. ಶಿಷ್ಟಾಚಾರ ಕಣ್ಮರೆಯಾಗಿದೆ. ಬಡವರ ಪರ ಇವರು ಯಾವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಿಗಳನ್ನು ಶಾಸಕರ ಮನೆಗೆ ಕರೆಯಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಅವರ ಮನೆಯಲ್ಲಿ ಅಧಿಕಾರಿಗಳು ಕೆಲಸ ಮಾಡುವುದಾದರೆ, ಕಚೇರಿಗಳು ಏಕೆ ಬೇಕು? ಎಂದು ಪ್ರಶ್ನಿಸಿದ ಶಾರದಾ ಅಪ್ಪಾಜಿಗೌಡ ಅವರು, ‘ಭದ್ರಾವತಿಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ’. ದೊಡ್ಡೇರಿ ಭಾಗದಲ್ಲಿ ೧೫ ಎಕರೆ ಅರಣ್ಯ ನಾಶ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆ ವಾಚರ್ ಅನ್ನು ಕೂಡಿ ಹಾಕಿ ಹೊಡೆಯಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಭದ್ರಾವತಿಯಲ್ಲಿ ಅರಣ್ಯವೇ ಉಳಿಯುವುದಿಲ್ಲ ಎಂದು ತಿಳಿಸಿದರು.
ಭದ್ರಾವತಿಯಲ್ಲಿ ಇಸ್ಪೀಟ್, ಜೂಜು ಅವ್ಯಾಹತವಾಗಿದೆ. ವಿವಿಧೆಡೆ ಶಿಫ್ಟ್ ಪ್ರಕಾರ ಜೂಜಾಟ ನಡೆಸಲಾಗುತ್ತಿದೆ. ದಾಳಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳೇ ಮಾಫಿಯಾಗಳಿಗೆ ಮೆಸೇಜ್ ರವಾನಿಸುತ್ತಾರೆ. ಸ್ಥಳದಿಂದ ಹೋಗುವಂತೆ ಸೂಚಿಸುತ್ತಿದ್ದಾರೆ ಎಂದರು.