w
Headlines
Home » ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ: 4 ಲಕ್ಷ ರೂ. ಲಂಚ ಬೇಡಿಕೆ ಪ್ರಕರಣದಲ್ಲಿ ಬಿಇಒ ಹಾಗೂ ಮಧ್ಯವರ್ತಿ ಬಂಧನ

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ: 4 ಲಕ್ಷ ರೂ. ಲಂಚ ಬೇಡಿಕೆ ಪ್ರಕರಣದಲ್ಲಿ ಬಿಇಒ ಹಾಗೂ ಮಧ್ಯವರ್ತಿ ಬಂಧನ

GridArt 20260302

Bhadravati BEO Nagendrappa AK was caught by Lokayukta police while accepting a bribe of Rs 1 lakh for approving teachers’ salary increments and pending allowances in Shivamogga district.

ಭದ್ರಾವತಿ: ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಭದ್ರಾವತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಾಗೇಂದ್ರಪ್ಪ ಎ.ಕೆ. ಅವರು ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪ್ರಕರಣದಲ್ಲಿ ಅವರ ಮಧ್ಯವರ್ತಿಯಾಗಿದ್ದ ಖಾಸಗಿ ವ್ಯಕ್ತಿ ಮಂಜುನಾಥನನ್ನೂ ಬಂಧಿಸಲಾಗಿದೆ.

ಲಿಂಗರಾಜು ಎಂಬ ಶಿಕ್ಷಕರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಹಾಗೂ ಇತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ಹಲವು ಬಾರಿ ಭದ್ರಾವತಿ ತಾಲ್ಲೂಕು ಬಿಇಒ ಹಾಗೂ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಬಿಇಒ ನಾಗೇಂದ್ರಪ್ಪ ಮತ್ತು ಮಧ್ಯವರ್ತಿ ಮಂಜುನಾಥ ಇಬ್ಬರೂ ಸೇರಿಕೊಂಡು ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಮಾಡಿಕೊಡುವುದಕ್ಕೆ 4 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ದಿನಾಂಕ 02-03-2026ರಂದು ದೂರು ದಾಖಲಾಗಿದ್ದು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ–1988 (ತಿದ್ದುಪಡಿ–2018)ರ ಕಲಂ 7(ಎ) ಅಡಿಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ, ಲಿಂಗರಾಜು ಅವರಿಂದ 1 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ನಡೆಸಿ ಹಣವನ್ನು ಜಪ್ತಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿತರಾದ ನಾಗೇಂದ್ರಪ್ಪ ಎ.ಕೆ. ಮತ್ತು ಮಧ್ಯವರ್ತಿ ಮಂಜುನಾಥರನ್ನು ತನಿಖೆ ಸಂಬಂಧ ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಅವರು ಕೈಗೊಂಡಿದ್ದಾರೆ. ಟ್ರ್ಯಾಪ್ ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗದ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಗುರುರಾಜ್ ಎನ್. ಮೈಲಾರ ಸೇರಿದಂತೆ ಇತರ ಸಿಬ್ಬಂದಿ ಭಾಗವಹಿಸಿದ್ದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ದಿನವೇ ಅವರ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.