ಹೆದ್ದಾರಿಪುರದ ಸಿಂಧುಗೆ ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಮೂರು ಚಿನ್ನ
ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರದ ಸಿಂಧು ಕೆ.ಟಿ ಕುವೆಂಪು ವಿಶ್ವವಿದ್ಯಾನಿಲಯದ ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ನೊಂದಿಗೆ ಮೂರು ಚಿನ್ನದ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಹೆದ್ದಾರಿಪುರ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ತಾಯಿ ದೇವಮ್ಮ ಮತ್ತು ತಿಮ್ಮಪ್ಪ ಗೌಡ ಅವರ ಪುತ್ರಿಯಾದ ಸಿಂಧು ಕೆ.ಟಿ ಅವರು, ಹೆದ್ದಾರಿಪುರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು, ಗರ್ತಿಕೆರೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದರು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಪ್ರಸ್ತುತ ’ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ.
ಅದ್ವಿತೀಯ ಸಾಧನೆಗೈದ ಗ್ರಾಮೀಣ ಭಾಗದ ಪ್ರತಿಭೆ ಸಿಂಧು ಕೆ ಟಿ ರವರು ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿ ನಮ್ಮೂರಿಗೆ ಕೀರ್ತಿ ತರಲೆಂದು ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ಆಶಿಸುತ್ತದೆ..