ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ

ಮೈಕ್ರೋ ಫೈನಾನ್ಸ್ ನವರಿಂದ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ

ತುಮಕೂರು : ಮೈಕ್ರೋ ಫೈನಾನ್ಸ್​ನವರಿಂದ ಬಡವರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು, ಕಾನೂನು ರಚಿಸುವ ಸಲುವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್​ ಕುರಿತು ಸಿಎಂ, ಡಿಸಿಎಂ, ಕಾನೂನು ಸಚಿವರು ಹಾಗೂ ನಾನು ಚರ್ಚೆ ಮಾಡಿದ್ದೇವೆ. ಆರ್​ಬಿಐ ಪ್ರತಿನಿಧಿಗಳು, ಮೈಕ್ರೋ ಫೈನಾನ್ಸ್ ಪ್ರತಿನಿಧಿ, ಪೊಲೀಸ್ ಇಲಾಖೆ, ರೆವೆನ್ಯೂ ಇಲಾಖೆ, ಹಣಕಾಸಿನ ಇಲಾಖೆಯವರೆಲ್ಲರೂ ಕುಳಿತು ಮಾತನಾಡಿದ್ದೇವೆ. ಸಿಎಂ ರಿವ್ಯೂ ಮಾಡುವಾಗ ಒಂದು ತೀರ್ಮಾನಕ್ಕೆ ಬಂದರು ಎಂದು ಹೇಳಿದರು.

ಅದರಲ್ಲಿ ಈಗಾಗಲೇ ಇರುವಂತಹ ಕಾನೂನನ್ನು ಭದ್ರ ಮಾಡುವಂತಹದ್ದು. ಮತ್ತು ಹೊಸದಾಗಿ ಏನಾದ್ರು ಪ್ರಾವಿಜನ್​ಅನ್ನ ಸೇರಿಸುವುದರ ಕುರಿತು ಚರ್ಚಿಸಿದ್ದೇವೆ. ಲೆಂಡಿಂಗ್ ಮಾಡುವವರಿಗೆ, ರಿಕವರಿ ಮಾಡುವವರಿಗೆ ಹಾಗೂ ಬೆನಿಫಿಷಿಯರಿಗೆ ತೊಂದರೆ ಮಾಡದಂತೆ ಆರ್​ಬಿಐ ಗೈಡ್​ಲೈನ್ಸ್​ಗಳಿವೆ. ಅದರಲ್ಲಿ, 6 ಗಂಟೆ ಮೇಲೆ ಹಣ ರಿಕವರಿ ಮಾಡಬಾರದು ಅಂತ ಇದೆ. ಅವಾಚ್ಯ ಶಬ್ದ ಬಳಕೆ ಮಾಡಬಾರದು. ಮನೆಗಳ ಮೇಲೆ ದಾಳಿ ಮಾಡಬಾರದು, ಅವರ ವಸ್ತುಗಳನ್ನ ಹೊತ್ತೊಯ್ಯಬಾರದು ಅಂತ ಇದೆ. ಅದನ್ನು ಪಾಲಿಸಬೇಕು ಅಂತ ನಾವು ಹೇಳಿದ್ದೇವೆ. ಅದಕ್ಕೆ ಕಾನೂನು ಏನಾದ್ರು ಬದಲಾವಣೆ ಮಾಡುವುದಿದ್ರೆ ಅದನ್ನ ನಾವು ಮಾಡುತ್ತೇವೆ. ಹೊಸದಾಗಿ ತರಬೇಕಾದ ಕಾನೂನನ್ನ ಆರ್ಡಿನೆನ್ಸ್​​ ಮೂಲಕ ತರಬೇಕು ಅಂದುಕೊಂಡಿದ್ದೇವೆ.ಇನ್ನೊಂದು ವಾರದಲ್ಲಿ ಆರ್ಡಿನೆನ್ಸ್ ಮಾಡಿ ಕ್ಯಾಬಿನೆಟ್​​ನಲ್ಲಿ ಅಪ್ರೂವಲ್ ಪಡೆದು ಗವರ್ನರ್​ಗೆ ಕಳುಹಿಸಿಕೊಡುತ್ತೇವೆ ಎಂದು ಮಾಹಿತಿ ನೀಡಿದರು.

ಅದು ಬಹಳ ಕಠಿಣವಾದ ಕಾನೂನು ಆಗಬೇಕು. ಹಾಗೆಯೇ ಪೊಲೀಸರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಏಕೆಂದ್ರೆ ಪೊಲೀಸರಿಗೆ ಈಗ ಸುಮೋಟೋ ಕೇಸ್ ದಾಖಲಿಸುವ ಅಧಿಕಾರ ಇಲ್ಲ. ಆದ್ದರಿಂದ ಅವರಿಗೆ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳುವ ಅಧಿಕಾರವನ್ನ ನೀಡಲು ನಿರ್ಧರಿಸಿದ್ದೇವೆ. ಐಪಿಸಿ ಸೆಕ್ಷನ್ನಲ್ಲಿ ಏನೇನು ಪ್ರಾವಿಜನ್ ಮಾಡಬೇಕೋ ಅದನ್ನ ಈ ಆರ್ಡಿನೆನ್ಸ್ ಮೂಲಕ ಕೊಡುತ್ತೇವೆ. ಕೇಂದ್ರ ಸರ್ಕಾರ ಇದನ್ನೇ ಚಿಂತನೆ ಮಾಡುತ್ತಿದೆ. ಕಳೆದ ಎಂಟತ್ತು ವರ್ಷಗಳಿಂದ ಇದನ್ನು ತರಬೇಕು ಅಂತ ಇದ್ದಾರೆ, ಆದರೆ ತಂದಿಲ್ಲ. ಅವರಿಗೂ ನಾವು ಒತ್ತಾಯ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಎಂದರು.

Leave a Reply

Your email address will not be published. Required fields are marked *