ಈಡೇರಿದ ವಂದಗದ್ದೇ ನಿವಾಸಿಗಳ ಬಹುದಿನಗಳ ಬೇಡಿಕೆ | ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬೇಳೂರು
ಮಾರುತಿಪುರ : ನಿರೇರೀ ಹಾಗೂ ವಂದಗದ್ದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಶಾಲಾ ಕಾಲುಸಂಕ ಕಾಮಗಾರಿಗೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು.
ಮಂಗಳವಾರ ವಂದಗದ್ದೆ – ನೀರೇರಿ ಗ್ರಾಮಗಳ ಸಂಪರ್ಕ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಆದಷ್ಟೂ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಇಂಜಿನೀಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಮಾರುತಿಪುರ ಗ್ರಾಪಂ ಅಧ್ಯಕ್ಷೆ ದೀಪೀಕಾ , ಗ್ಯಾರಂಟಿ ಯೋಜನೆಯ ತಾಲೂಕ್ ಅಧ್ಯಕ್ಷ ಚಿದಂಬರ ,ಬಿ ಜಿ ಚಂದ್ರಮೌಳಿ ,ಗ್ರಾಪಂ ಸದಸ್ಯರುಗಳು , ಶಾಸಕರ ಆಪ್ತಕಾರ್ಯದರ್ಶಿ ಸಣ್ಣಕ್ಕಿ ಮಂಜು ಹಾಗೂ ಇನ್ನಿತರರಿದ್ದರು.
ಈಡೇರಿದ ಬಹುದಿನಗಳ ಬೇಡಿಕೆ ;
ನಿರೇರಿ – ವಂದಗದ್ದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲುಸಂಕ ಬೇಕೆಂಬ ಸ್ಥಳೀಯರ ದಶಕಗಳ ಬೇಡಿಕೆ ಈಗ ನೆರವೇರಿದೆ.
ಮಳೆಗಾಲ ಬಂತೆಂದರೆ ಈ ಹಳ್ಳಿ ಜನರಿಗೆ ಆತಂಕ. ಊರಿಂದ ಹೊರ ಹೋಗಬೇಕೆಂದರೆ, ಹೊಳೆ ದಾಟುವ ಹರಸಾಹಸ ಮಾಡಲೇಬೇಕಿತ್ತು, ಹೊಳೆ ದಾಟಿದರೆ ಮಾತ್ರ ಶಾಲೆ, ಆಸ್ಪತ್ರೆ, ಪೇಟೆ… ಇದು ಅಮ್ಮನಘಟ್ಟ ತಪ್ಪಲಿನ ಹಳ್ಳಿಗಳ ವಂದಗದ್ದೆ, ಪುರಲೇಮಕ್ಕಿ, ಮೇಲಿನ ನೀರೇರಿ, ಕಿತ್ತಲೆಮರ ಜಡ್ಡು, ಮೇಲಿನ ಚತ್ರಳ್ಳಿ ಮುಂತಾದ ಗ್ರಾಮದ ನಿವಾಸಿಗಳ ಗೋಳಾಗಿತ್ತು.
ಈ ಭಾಗದಿಂದ ಹತ್ತಾರು ಮಕ್ಕಳು ಸಮೀಪದ ಮಜ್ವಾನ ಹಾಗೂ ನೀರೇರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳನ್ನು ಹಳ್ಳ ದಾಟಿಸುವುದು ಪೋಷಕರಿಗೆ ನಿತ್ಯದ ಕಾಯಕವಾಗಿತ್ತು. ಬೆಳಗ್ಗೆ, ಸಂಜೆ ಪೋಷಕರು ಹಳ್ಳದ ಬಳಿ ನಿಂತು ಮಕ್ಕಳ ಕೈಹಿಡಿದು ದಾಟಿಸುವಂತಹ ದುಸ್ಥಿತಿ ಇತ್ತು ಆದರೆ ಈಗ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿರುವುದರಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಹಾಗೇಯೆ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಭರಪೂರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.