ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ – ಶಾಸಕ ಬೇಳೂರು
ಹೊಸನಗರ : ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

ಮಾರುತಿಪುರ ಗ್ರಾಪಂ ವ್ಯಾಪ್ತಿಯ ನಿರೇರಿ ಸರ್ಕಾರಿ ಶಾಲೆಯಲ್ಲಿ ನೂತನ ಶಾಲಾ ಕೊಠಡಿ,ಮೈದಾನ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಧ್ಯಜಕಟ್ಟೆ ಉದ್ಘ್ತಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸರ್ಕಾರದ ಕೆಲಸವಷ್ಟೇ ಎಂಬ ಮನಸ್ಥಿತಿ ಸರಿಯಲ್ಲ. ಸ್ಥಳೀಯರು, ಉಳ್ಳವರು, ದಾನಿಗಳು ಅಗತ್ಯ ಸಹಕಾರ, ಪ್ರೋತ್ಸಾಹ ನೀಡಿದರೆ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೊಳ್ಳಲಿದೆ. ಜತೆಗೆ ನಮ್ಮ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಿ, ಊರಿನ ಕೀರ್ತಿ ಹೆಚ್ಚಿಸಲಿದ್ದಾರೆ ಎಂದರು.


ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅದೆಷ್ಟೋ ಜನ ದೇಶದ ಅತ್ಯುನ್ನತ ಹುದ್ದೆಗಳನ್ನು, ಐಎಎಸ್, ಐಪಿಎಸ್ ಅಧಿಕಾರಗಳನ್ನು ಪಡೆದಿದ್ದಾರೆ; ವಿಜ್ಞಾನಿ, ಇಂಜಿನಿಯರ್, ವೈದ್ಯರಾಗಿದ್ದಾರೆ. ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಜ್ಞಾನಪೀಠ, ಸರಸ್ವತಿ ಸಮ್ಮಾನ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲಿ ಓದಿದ ಅದೆಷ್ಟೋ ಜನರು ವಿಶ್ವಕ್ಕೇ ದಾರಿ ತೋರಿಸಿದ್ದಾರೆ ಇಂತಹ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಈ ಶಾಲೆಯ ರಂಗಮಂದಿರ ಹಾಗೂ ಧ್ಯಜದ ಕಟ್ಟೆಯನ್ನು ಕಟ್ಟಡ ಕಾರ್ಮಿಕರ ಸಂಘದವರು ಶ್ರಮದಾನ ಮಾಡುವ ಮೂಲಕ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯವಾಗಿದ್ದು ಕಾರ್ಮಿಕರ ಸಂಘದ ಉತ್ತಮ ಕೆಲಸ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. ಶಾಲೆಯ ಮೈದಾನದ ಕಾಮಗಾರಿಗೆ ಒಂದು ಲಕ್ಷ ರೂ ಅನುದಾನವನ್ನು ಸ್ಥಳದಲ್ಲಿಯೇ ಘೋಷಿಸಿದರು.


ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ ಸರ್ಕಾರಿ ಶಾಲೆಗಳು ನಮ್ಮ ಅಸ್ಮಿತೆಯಾಗಿದ್ದು ಅದನ್ನು ಉಳಿಸುಕೊಳ್ಳುವಲ್ಲಿ ನಾವೆಲ್ಲರೂ ಸರ್ಕಾರಿ ಶಾಲೆಗಳೊಂದಿಗೆ ಕೈಜೋಡಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾಗಿದೆ , ನೀರೇರಿ ಶಾಲೆಯಲ್ಲಿ ರಂಗಮಂದಿರ ಹಾಗೂ ಧ್ವಜದ ಕಟ್ಟೆಯ ಕೊರತೆ ಇರುವ ಬಗ್ಗೆ ಕಟ್ಟಡ ಕಾರ್ಮಿಕರ ಸಂಘದ ಹೊಸನಗರ ಗ್ರಾಮಾಂತರ ಅಧ್ಯಕ್ಷ ಮಹಮ್ಮದ್ ಹುಸೇನ್ ಹಾಗೂ ಪ್ರಭಾಕರ್ ಆಚಾರ್ ಗಮನಕ್ಕೆ ತಂದು ಅವರ ತಂಡದೊಂದಿಗೆ ಇಂತಹ ಮಹತ್ಕಾರ್ಯ ನಡೆಸಿಕೊಟ್ಟಿದ್ದಾರೆ ಅವರಿಗೆ ಜಿಲ್ಲಾ ಸಂಘದ ಪರವಾಗಿ ಅಭಿನಂದನೆಗಳು ತಿಳಿಸಿದರು.
ಈ ಸಂಧರ್ಭದಲ್ಲಿ ಮಾರುತಿಪುರ ಗ್ರಾಪಂ ಅಧ್ಯಕ್ಷೆ ದೀಪೀಕಾ ಆರ್ , ತಾಲೂಕ್ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಚಿದಂಬರ ,ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್ ,ಬಿ ಜಿ ಚಂದ್ರಮೌಳಿ, ಹೊಸನಗರ ಕ್ಷೇತ ಶಿಕ್ಷಣಾಧಿಕಾರಿ ಎಚ್ ಆರ್ ಕೃಷ್ಣಮೂರ್ತಿ , ಮಹಮ್ಮದ್ ಹುಸೇನ್ , ಪ್ರಭಾಕರ್ ಆಚಾರ್ , ಶಿವಮೂರ್ತಿ ಬೆಳ್ಳೂರು ಹಾಗೂ ಇನ್ನಿತರರಿದ್ದರು.