ಶಾಂತಿ ಸೌಹಾರ್ಧತೆಯಿಂದ ಐಕ್ಯತೆ ಸಾಧ್ಯ – ಸೊನಲೆ ಶ್ರೀನಿವಾಸ್

ರಿಪ್ಪನ್‌ಪೇಟೆ : ಶಾಂತಿ, ಸೌಹಾರ್ಧತೆಯನ್ನು ಬೆಳೆಸಿದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ. ಜತೆಗೆ ಸರ್ವರೂ ಸಮನ್ವಯತೆಯಿಂದ ಬದುಕಬಹುದು ಎಂದು ಇತಿಹಾಸಕಾರ ಸೊನಲೆ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಆವರಣದ ಕೂರ ತಂಝಲ್ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಆಯೋಜಿಸಿದ್ದ ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋಧನಾಕಾರಿಗಳೇ ಪ್ರಜ್ವಲಿಸುತ್ತವೆ. ಇದರಿಂದ ದೇಶದಲ್ಲಿ ಅಶಾಂತಿ ಮೂಡುತ್ತದೆ. ವ್ಯಕ್ತಿ, ಕುಟುಂಬ, ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಾ ಹೋಗುತ್ತವೆ. ಆತಂಕವಾದಿಗಳ ಮತ್ತಷ್ಟು ಪ್ರಬಲರಾಗುತ್ತಾರೆ. ಸಮಾಜವನ್ನು ಸರ್ವನಾಶ ಮಾಡುತ್ತಾರೆ. ಇಂತಹ ಸನ್ನಿವೇಶಗಳ ನಡುವೆ ಸರ್ವಜನಾಂಗದ ಪ್ರೀತಿ, ಸಹಬಾಳ್ವೆ, ನೆಮ್ಮದಿಯ ಸಂದೇಶವನ್ನು ಸಾರುವ ಸೌಹಾರ್ಧ ಸಮ್ಮೇಳನಗಳು ಹೆಚ್ಚೆಚ್ಚು ನಡೆಯಲಿ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದರು.

ನಿಟ್ಟೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ನಿಲ್ಸ್ ಕಲ್ ಮಾತನಾಡಿ ಮಹಮ್ಮದ್ ಪೈಗಂಬರ್ ರವರು ಅರಸರಾದಾಗಲೂ ಅವರು ಬಡತನದ ಜೀವನವನ್ನೇ ನಡೆಸಿದರು. ಯಾರಾದರೂ ಎದ್ದು ನಿಂತು ತನಗೆ ಗೌರವ ಸೂಚಿಸುವುದನ್ನೂ ಅವರು ಇಷ್ಟಪಡುತ್ತಿರಲಿಲ್ಲ. ತಮ್ಮನ್ನು ಯಾರಾದರೂ ಅತಿಯಾಗಿ ಹೊಗಳಿದರೆ ತುಂಬಾ ಕಸಿವಿಸಿಗೊಳ್ಳುತ್ತಿದ್ದರು. ದೇವರ ದಾಸ ಎಂದು ಮಾತ್ರ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದ ಅವರು ಸಾವನ್ನಪ್ಪಿದಾಗ ಕೆಲವೇ ಕೆಲವು ನಾಣ್ಯಗಳು ಮಾತ್ರ ಅವರ ಸಂಪತ್ತಾಗಿದ್ದವು. ಮದೀನಾದ ಅಧಿಪತಿಯಾದ ಅವರು ವಿನಮ್ರತೆ ಮತ್ತು ಸರಳತೆಯ ಮೂಲಕ ಆಳುವವರು ತಮ್ಮ ಬದುಕನ್ನು ಹೇಗೆ ಒಪ್ಪಗೊಳಿಸಿಕೊಳ್ಳಬಹುದು ಎಂಬುದಕ್ಕೆ ಒಂದು ಉದಾಹರಣೆಯಂತಿದ್ದರು. ಇಷ್ಟು ಬಡತನವನ್ನು, ಸರಳತೆಯನ್ನು ಮತ್ತು ವಿನಮ್ರತೆಯನ್ನು ಬದುಕಿದ ಅರಸ ಯಾವುದೇ ಕಾಲದ, ಯಾವುದೇ ನಾಡಿನ ಚರಿತ್ರೆಯಲ್ಲಿ ಮತ್ತೊಬ್ಬರು ಸಿಗಲು ಸಾಧ್ಯವೇ ಇಲ್ಲ.ಮಾನವ ಕುಲ ತಾನೊಂದೆವಲಂ ಅಥವಾ ವಸುದೈವ ಕುಟುಂಬಕಂ ಎಂಬ ತತ್ತ್ವ ಪೈಗಂಬರರ ಮಾತು ಮತ್ತು ಕೃತಿಯಲ್ಲಿ ಧಾರಾಳವಾಗಿ ಬೆರೆತಿದೆ. ಅರಬ್ಬಿ-ಅರಬಿಯೇತರ, ಬಿಳಿಯ-ಕರಿಯ ಇವರಲ್ಲಿ  ಯಾರು ಶ್ರೇಷ್ಠರೂ ಅಲ್ಲ, ಯಾರು ಕನಿಷ್ಠರೂ ಅಲ್ಲ. ಭೂಮಿಯಲ್ಲಿರುವ ಎಲ್ಲ ಮಾನವರು ಒಂದೇ ತಾಯ್ತಂದೆಯರ ಮಕ್ಕಳೆಂದು ಅವರು ಹೇಳುತ್ತಿದ್ದರು. ಅವರ ನುಡಿ ಮತ್ತು ನಡೆ ಎರಡೂ ಒಂದೇ ಆಗಿದ್ದವು. ಯಹೂದಿಯೊಬ್ಬನ ಶವವನ್ನು ಸಂಸ್ಕಾರಕ್ಕೆ ತೆಗೆದು ಕೊಂಡು ಹೋಗುವುದನ್ನು ಕಂಡಾಗ ಪ್ರವಾದಿ ಎದ್ದು ನಿಂತು ಗೌರವ ಸೂಚಿಸಿದ್ದರು. ಅವರು ಆ ವ್ಯಕ್ತಿಯಲ್ಲಿ ಮನುಷ್ಯನನ್ನು ಕಾಣುತ್ತಿದ್ದರೇ ಹೊರತು ಜಾತಿ ಮತ ಪಂಥವನ್ನಲ್ಲ ಅಂತಹ ವ್ಯಕ್ತಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.

ಇದೇ ಸಂಧರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ವಾಸುದೇವ್ ಕೆ ಹೆಚ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ ವಹಿಸಿದ್ದರು.

ಈ ಸಂಧರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ ,ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಆಸೀಫ಼್ ಬಾಷಾ , ನಿರೂಪ್ ಕುಮಾರ್, ಪಿಡಿಓ ಮಧುಸೂಧನ್ ,SYS ಸಂಘಟನೆಯ ಅಧ್ಯಕ್ಷ ಮಹಮ್ಮದ್ ಹನೀಫ಼್ , ಮಿಲಾದ್ ಸಮಿತಿ ಅಧ್ಯಕ್ಷ ನಾಸೀರ್ ಹಮೀದ್ ಸಾಬ್ , SSF ಅಧ್ಯಕ್ಷ ಅಜ್ಮಲ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *