ಗಾಂಧೀ ಮತ್ತು ಸೇವೆ ಸಾರ್ವಕಾಲಿಕ ಸತ್ಯಗಳು – ಮಂಜುನಾಥ. ಕೆ. ಆರ್
ಬಟ್ಟೆಮಲ್ಲಪ್ಪ : ಸೇವೆ ಮತ್ತು ಅಹಿಂಸೆ ತತ್ವಗಳು ಜಗತ್ತಿಗೆ ಗಾಂಧೀಜಿ ನೀಡಿದ ಸಾರ್ವಕಾಲಿಕ ಸತ್ಯಗಳು ಎಂದು ಹರಿದ್ರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಕೆ. ಆರ್ ಅಭಿಪ್ರಾಯಪಟ್ಟರು.
ಇಂದು ಮಹಾತ್ಮ ಗಾಂಧೀ ಮತ್ತು ಶಾಸ್ತ್ರೀ ಜಿಯವರ ಜಯಂತಿ ಅಂಗವಾಗಿ ಬಟ್ಟೆಮಲ್ಲಪ್ಪ ಸರ್ಕಲನಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ಹಾಗೂ ಚೆನ್ನಮ್ಮಾಜಿ ಪ್ರೌಢ ಶಾಲೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶ್ರಮದಿನವನ್ನು ಉದ್ಘಾಟಿಸಿ ಅವರು ಮಾತನಾಡಿ ಗಾಂಧೀಜಿ ಅವರ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಇತಿಹಾಸ ಎಂದೂ ಒಂದೇ ಆಗಿರುತ್ತದೆ. ಅದನ್ನು ತಿರುಚುವುದರಿಂದ ಯಾವುದೇ ಉಪಯೋಗ ಭಾರತಕ್ಕಾಗಲಿ, ಜಗತ್ತಿಗಾಗಲಿ ಇಲ್ಲವೇ ಮನುಷ್ಯ ಕುಲಕ್ಕಾಗಲಿ ಆಗುವುದಿಲ್ಲ. ಹೀಗಾಗಿ ಗಾಂಧಿಯವರ ಬಗ್ಗೆ ತಪ್ಪು ಕಲ್ಪನೆ ಮತ್ತು ಅಪಪ್ರಚಾರದಿಂದ ಹೊರಬರಬೇಕಿದೆ. ಗಾಂಧಿ ಹಾಗೂ ಶಾಸ್ತ್ರೀ ಜಿಯವರು ಜಗತ್ತಿನ ಎರಡು ಅಮೂಲ್ಯ ರತ್ನಗಳು ಎಂದು ಹೇಳಿದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಮಾತನಾಡಿ ಶಾಂತಿ ಮತ್ತು ಸೇವೆಯ ಮೂಲಕ ಏನನ್ನ ಬೇಕಾದರೂ ಗೆಲ್ಲಬಹುದು ಎಂದು ತೋರಿಸಿಕೊಟ್ಟವರು ಮಹಾತ್ಮ ಗಾಂಧೀಜಿ. ಹೀಗಾಗಿ ಇಂದಿನ ತಲೆಮಾರಿಗೆ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳು ದಾರಿ ದೀಪವಾಗಿವೆ ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವಗಳು ಜೀವಂತ ಉಳಿಯಬೇಕಾದರೆ ಗಾಂಧೀಜಿ ವಿಚಾರಗಳು ನಿತ್ಯ ನೂತನವಾಗಬೇಕಿವೆ ಎಂದು ಹೇಳಿದ ರಾಘವೇಂದ್ರ, ಮಕ್ಕಳು ಹೆಚ್ಚು ಹೆಚ್ಚು ಗಾಂಧೀ ವಿಚಾರಧಾರೆಗಳನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯರಾದ ಗುರುಮೂರ್ತಿ ಒಡ್ಡಿಮನೆ, ಸಂತೋಷ, ಗುರುಕುಲ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ, ಮುಖ್ಯ ಶಿಕ್ಷಕರಾದ ಶಿವರಾಜ್, ಸಂಸ್ಥೆ ಕಾರ್ಯದರ್ಶಿ ರಶ್ಮಿ ,ಚೆನ್ನಮ್ಮಾಜಿ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ್, ಪರುಶುರಾಮ ಮತ್ತು ಎರಡೂ ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಟ್ಟೆಮಲ್ಲಪ್ಪ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಎರಡೂ ಶಿಕ್ಷಣ ಸಂಸ್ಥೆಯ ಮಕ್ಕಳು ಮತ್ತು ಸಿಬ್ಬಂದಿ ಸ್ವಚ್ಚತಾ ಕಾರ್ಯ ಕೈಗೊಂಡರು.