ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೆವ್ವ – ಪೊಲೀಸರಿಂದ ಖಡಕ್ ವಾರ್ನಿಂಗ್
ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಗರದ ಕಾರ್ಗಲ್‌ನಲ್ಲಿ ಭೂತದ ಕಾಟದ ಕಾರಣ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಫೋಟೋಗಳ ಸಹಿತ ಸುದ್ದಿ ಹರಿದಾಡಿ ಜನ ಆತಂಕಿತರಾದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸ್ ಇಲಾಖೆ, ಈ ಸುಳ್ಳು ಸುದ್ದಿ ಹರಡಿ ಕುಚೋದ್ಯ ಮಾಡಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಅ. 27 ರಂದು ರಾತ್ರಿ ತಾಲೂಕಿನ ಕಾರ್ಗಲ್‌ನ ಸಮೀಪ ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ ಅಪಘಾತವಾಗಿದೆ. ಒಬ್ಬರಿಗೆ ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆಂದು ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು.
ಈ ಕುರಿತಾಗಿ ಸಾಗರ ಉಪವಿಭಾಗದ ಕಾರ್ಗಲ್ ಪೊಲೀಸ್ ಠಾಣೆ ಅಧಿಕೃತ ಪ್ರಕಟಣೆ ನೀಡಿದ್ದು, ಇದು ಸುಳ್ಳು ಸುದ್ದಿಯಾಗಿದೆ. ಸಾರ್ವಜನಿಕರು ಭಯಪಡುವ ಅವಶ್ಯಕತೆ ಇರುವುದಿಲ್ಲ.
ಈ ರೀತಿಯ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಕಾನೂನು ರೀತಿಯ ಅಪರಾಧವಾಗಿದೆ. ಈ ರೀತಿ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.