ರಿಪ್ಪನ್‌ಪೇಟೆ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಪೊಲೀಸ್ ಬಂದೋಬಸ್ತ್ ,ಮೆರವಣಿಗೆಯ ಸಿದ್ಧತೆ?
ರಿಪ್ಪನ್‌ಪೇಟೆ : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ(HMS) ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು,ಪಟ್ಟಣದಾದ್ಯಂತ ಕೇಸರಿಮಯವಾಗಿದೆ. ಇನ್ನು, ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ (Bandobast) ಕೈಗೊಳ್ಳಲಾಗಿದೆ.
ಪಟ್ಟಣದ ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ವತಿಯಿಂದ 57ನೇ ವರ್ಷದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.ಮಂಗಳವಾರ ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ.ಮಂಗಳವಾರ ಸಂಜೆ ಮೆರವಣಿಗೆ ಹೊರಟು ನಾಲ್ಕು ಪ್ರಮುಖ ರಸ್ತೆಗಳಲ್ಲಿ ರಾಜಬೀದಿ ಉತ್ಸವ ತೆರಳಿ ಬುಧವಾರ ಮಧ್ಯಾಹ್ನ ಹೊಸನಗರ ರಸ್ತೆಯ ತಾವರೆಕೆರೆಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.
ಗಣಪತಿ ಮೆರೆವಣಿಗೆ ಸಾಗುವ ಹಾದಿ ಉದ್ದಕ್ಕು ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್ ಕಟ್ಟಿ ಹಿಂದು ಸಂಘಟನೆಗಳ ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ.ವಿನಾಯಕ ಸರ್ಕಲ್ ಸೇರಿದಂತೆ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ. ಇನ್ನು, ಪ್ರತಿ ವರ್ಷದಂತೆ ಈ ಬಾರಿಯು ಅನ್ನಸಂತರ್ಪಣೆ, ಮೆರವಣಿಗೆಯಲ್ಲಿ ಸಾಗುವವರಿಗೆ ತಂಪು ಪಾನೀಯ, ಸಿಹಿ ತಿಂಡಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಇಬಿ ಮುಂಭಾಗದಲ್ಲಿ ರಾತ್ರಿ ಮಾರ್ವಾಡಿಗಳ ಸಂಘದ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಮೆರವಣಿಗೆ ಸುಗಮವಾಗಿ ಸಾಗಲು ರಿಪ್ಪನ್‌ಪೇಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ (Bandobast) ಕೈಗೊಳ್ಳಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕೆ 01 ಡಿವೈಎಸ್‌ಪಿ, 2 ಇನ್ಸ್‌ಪೆಕ್ಟರ್‌ಗಳು, 09 ಸಬ್ ಇನ್ಸ್‌ಪೆಕ್ಟರ್‌ಗಳು, 23 ಸಹಾಯಕ ಪೊಲೀಸ್ ಉಪನಿರೀಕ್ಷಕರು, 72 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್‌ಗಳು, 100 ಗೃಹರಕ್ಷಕ ದಳ ಸಿಬ್ಬಂದಿ,11 ಸ್ವಯಂ ಸೇವಕರು ನಿಯೋಜಿತರಾಗಿದ್ದಾರೆ.