w
Headlines
Home » ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

Screenshot 20240927 153233 WhatsApp.jpg

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ ಸಂಗಮ

ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು.

ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಆಯೋಜಿಸಿದ್ದ ಸೌಹಾರ್ಧ ಸಂಗಮ ಹಾಗೂ ಶಾಸಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನುದೇಶಿಸಿ ಅವರು ಮಾತನಾಡಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಬದಲಾವಣೆ ತರಬೇಕು ,ಮುಸಲ್ಮಾನರ ಮಕ್ಕಳೆಂದರೇ ಕೇವಲ ಪಂಚರ್ ಅಂಗಡಿ , ಗುಜುರಿ ಅಂಗಡಿ ಇಡುತ್ತಾರೆ ಎನ್ನುವುದು ಬದಲಾಗಲಿ ಉತ್ತಮ ಶಿಕ್ಷಣ ನೀಡಿ ನಿಮ್ಮಲ್ಲೂ ಐಪಿಎಸ್ ,ಐಎಎಸ್ ಮಾಡುವಂತಾಗಬೇಕು ಎಂದರು.

ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಭೇಧ ಭಾವ ಬರಲೇ ಬಾರದು ,ತಮ್ಮ ತಮ್ಮ ಧರ್ಮವನ್ನು‌ ಆಚರಣೆ ಮಾಡುತ್ತಾ ಎಲ್ಲರನ್ನೂ ಗೌರವಿಸಬೇಕು,ನಾಡಿನಲ್ಲಿ ಕೆಲವರ ಸ್ವಾರ್ಥ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ‌ ಪುರಾತನದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗೂ ಸಹ ಎಂದಿಗೂ ಜಾತಿ-ಧರ್ಮದ ಹೆಸರಲ್ಲಿ ಸಂಘರ್ಷಗಳು ನಡೆದಿಲ್ಲ.ದ್ವೇಷ ಬಿಟ್ಟು ದೇಶ ಕಟ್ಟಬೇಕು. ವಿವೇಕದಿಂದ ವರ್ತಿಸಿ ಅವಿವೇಕತನವನ್ನು ತೊರೆಯಬೇಕು. ವಿಚಾರವಂತರಾಗಿ ವಿಕಾರತೆಯನ್ನು ತೊರೆಯಬೇಕೆಂದು ಹೇಳಿದರು.

ಸೌಹಾರ್ಧ ಸಂಗಮ ಕಾರ್ಯಕ್ರಮದ ಮುಖ್ಯ ಪ್ರಭಾಷಣಕಾರ ಅಬ್ದುರಶೀದ್ ಜೈನಿ ಮಾತನಾಡಿ ಧರ್ಮದ ಹೆಸರಿನಲ್ಲಿ ನಡೆಯುವ ಗಲಭೆಗಳಿಂದ ಯಾವುದೇ ಧರ್ಮ ಉದ್ದಾರವಾಗಲು ಸಾಧ್ಯವಿಲ್ಲ, ದೇವರನ್ನು ನಂಬುವ ಮಂದಿ ಎಂದೂ ಅಶಾಂತಿಗೆ ಕಾರಣರಾಗುವುದಿಲ್ಲ. ದೇವರನ್ನು ನಂಬದ, ಧರ್ಮದ ಮೇಲೆ ಗೌರವ ಇಲ್ಲದ ನಕಲಿ ಧರ್ಮ ರಕ್ಷಕರು ಇಂದು ಸಮಾಜವನ್ನು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಭಾರತ ದೇಶದಲ್ಲಿರುವ ಪ್ರತಿಯೊಬ್ಬರೂ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ಜಗತ್ತಿನಲ್ಲಿ ನಮ್ಮ ದೇಶ ಶಕ್ತಿಯುತವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಭದ್ರಾವತಿ ಧರ್ಮಕ್ಷೇತ್ರದ ಧರ್ಮಗುರುಗಳಾದ ಫಾದರ್ ಸ್ಟೀವನ್ ಡೆಸಾ ಮಾತನಾಡಿ ಪ್ರತೀಯೊಬ್ಬ ನಾಗರಿಕನೂ ಅವರವರ ಧರ್ಮಕ್ಕನುಸಾರವಾಗಿ ಪರಸ್ಪರ ಪ್ರೀತಿಯಿಂದ ಬದುಕಿದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗಬಹುದು. ಮನುಷ್ಯರು ಮಾನವೀಯತೆಯಿಂದ ದೂರವಾಗುತ್ತಿದ್ದು ಪ್ರಾಣಿ, ಪಕ್ಷಿಗಳಿಂದ ನಾವು ಮಾನವೀಯತೆಯನ್ನು ಕಲಿಯಬೇಕಾದ ಸ್ಥಿತಿ ಎದುರಾಗಿದೆ. ದೇಶದ ಸಂವಿದಾನವನ್ನು ಪ್ರತೀಯೊಬ್ಬರು ಗೌರವಿಸಬೇಕು, ಕಾನೂನಿಗೆ ಗೌರವ ಕೊಡುವ ವ್ಯಕ್ತಿಗಳು ನಾವಾದರೆ ಎಲ್ಲ ಕಡೆಯೂ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿಟ್ಟೂರು ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಮಾತನಾಡಿ  ನಶ್ವರವಾದ ಈ ಶರೀರವನ್ನು ಅಮರವಾದ ಕೆಲಸಕ್ಕೆ ಬಳಸಿಕೊಳ್ಳಬೇಕು ಎನ್ನುವ ಹಿನ್ನಲೆಯಲ್ಲಿ ಈ ಭೂಮಿಯ ಮೇಲೆ ನಮಗೆ ಬಹಳಷ್ಟು ತತ್ವ ಸಿದ್ದಾಂತಗಳನ್ನು ಅನೇಕ ಧರ್ಮಗುರುಗಳು , ಪ್ರವಾದಿಗಳು ಕೊಟ್ಟು ಹೋಗಿದ್ದಾರೆ. ಮನುಕುಲಕ್ಕೆ ಶಾಂತಿ, ಮಾನವೀಯತೆಯನ್ನು ಕಲಿಸಿಕೊಟ್ಟ ಪ್ರವಾದಿಯವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅನುಷ್ಠಾನಕ್ಕೆ ತರುವಂತಹ ಕೆಲಸ ಮಾಡಿದಾಗ ಮಾತ್ರ ಎಲ್ಲರೂ ಉತ್ತಮ ಹಾಗೂ ಸೌಹಾರ್ಧಯುತವಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ,ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಭಾನು ಹಾಗೂ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ರವರನ್ನು ಜುಮ್ಮಾ ಮಸೀದಿ ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ ವಹಿಸಿದ್ದರು.

ಈ ಸಂಧರ್ಭದಲ್ಲಿ ಈದ್ ಮಿಲಾದ್ ಸಮಿತಿ ಅಧ್ಯಕ್ಷ ನಾಸೀರ್ ಹಮೀದ್ ಸಾಬ್ , ತೀರ್ಥಹಳ್ಳಿ ಪಪಂ ಅಧ್ಯಕ್ಷ ರಹಮತುಲ್ಲಾ ಅಸಾದಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ , ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ , ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಕೆಡಿಪಿ ಸದಸ್ಯರಾದ ಆಸೀಫ಼್ ಭಾಷಾ , ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸಾಧಿಕ್ ಕಚ್ಚಿಗೆಬೈಲು, ಶಂಶುದ್ದೀನ್ ಆರ್ ಎಸ್ , ಮಹಮ್ಮದ್ ಹನೀಫ಼್ , ರವೀಂದ್ರ ಕೆರೆಹಳ್ಳಿ , ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರುಗಳು ,ssf ಅಧ್ಯಕ್ಷ ಅಜ್ಮಲ್ ಹಾಗೂ ಇನ್ನಿತರರಿದ್ದರು.

ಆಸೀಪ್ ಭಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು ರಿಜ್ವಾನ್ ಕಾರ್ಯಕ್ರಮವನ್ನು ನಿರೂಪಿಸಿದರು‌

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.