ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಓದಿದ್ದ ಶಾಲೆ 10 ಲಕ್ಷ ಮೊತ್ತದ ಪರಿಕರ ದೇಣಿಗೆ ನೀಡಿದ ಮಧು ಬಂಗಾರಪ್ಪ

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಓದಿದ್ದ ಶಾಲೆ 10 ಲಕ್ಷ ಮೊತ್ತದ ಪರಿಕರ ದೇಣಿಗೆ ನೀಡಿದ ಮಧು ಬಂಗಾರಪ್ಪ

ಸೊರಬ : ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಓದಿದ್ದ ಸ್ವಗ್ರಾಮ ಸೊರಬ ತಾಲ್ಲೂಕಿನ ಕುಬಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯೂ ಆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ₹10 ಲಕ್ಷ ಮೌಲ್ಯದ ಪರಿಕರಗಳನ್ನು ವೈಯಕ್ತಿಕವಾಗಿ ಕೊಡುಗೆ ನೀಡಿದರು.

ಆ ಮೂಲಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಜ್ಯಮಟ್ಟದಲ್ಲಿ ಆರಂಭಿಸಿರುವ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಶುಕ್ರವಾರ ವಿಶಿಷ್ಟವಾಗಿ ಚಾಲನೆ ನೀಡಿದರು.

ಸಚಿವರು ನೀಡಿದ ಕೊಡುಗೆಯಲ್ಲಿ ಕಂಪ್ಯೂಟರ್, ಯುಪಿಎಸ್, ಸ್ನಾರ್ಟ್ ಕ್ಲಾಸ್, ಗ್ರಂಥಾಲಯಕ್ಕೆ ಪುಸ್ತಕಗಳು ಸೇರಿದಂತೆ ಪಠ್ಯ ಹಾಗೂ ಕ್ರೀಡೆಗೆ ಪೂರಕವಾದ ಪರಿಕರಗಳು ಒಳಗೊಂಡಿವೆ.

ಈ ವೇಳೆ ಮಾತನಾಡಿದ ಮಧು ಬಂಗಾರಪ್ಪ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇರುವವರು, ಉದ್ಯಮಿಗಳು ಆ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಉನ್ನತ ಹುದ್ದೆ, ಉದ್ಯಮಿಗಳು ಮಾತ್ರವಲ್ಲ ಶಾಲೆಯ ಬಗ್ಗೆ ಪ್ರೀತಿ ಹೊಂದಿದವರು ಅಳಿಲು ಸೇವೆ ನೀಡಬಹುದು’ ಎಂದರು.

‘ ಸರ್ಕಾರಿ ಶಾಲೆಗಳು ಸಮುದಾಯದ ಆಸ್ತಿ. ಅಲ್ಲಿನ ಮಕ್ಕಳ ಬಗ್ಗೆ ಜನಸಾಮಾನ್ಯರಲ್ಲಿ ಕಾಳಜಿ ಹೆಚ್ಚಿಸಲು ‘ನನ್ನ ಶಾಲೆ, ನನ್ನ ಜವಾಬ್ದಾರಿ’ ಕಾರ್ಯಕ್ರಮ ಆರಂಭಿಸಲಾಗಿದೆ. ದೇಣಿಗೆ ಕೊಡುವವರು, ಅಭಿವೃದ್ಧಿಗೆ ಕೈ ಜೋಡಿಸುವವರು ಆಯಾ ಶಾಲಾ ಆಡಳಿತವನ್ನು ಸಂಪರ್ಕಿಸಬಹುದು’ ಎಂದರು.

‘ಮಂಡ್ಯ ಜಿಲ್ಲೆ ಮಳವಳ್ಳಿ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ ₹ 6 ಕೋಟಿಗೂ ಹೆಚ್ಚು ಹಣ ದೇಣಿಗೆ ನೀಡಿ ಹಳೆಯ ವಿದ್ಯಾರ್ಥಿಗಳು ಸುಸಜ್ಜಿತ ಶಾಲಾ ಕಟ್ಟಡಗಳ ಕಟ್ಟಿಸಿಕೊಟ್ಟಿದ್ದಾರೆ. ಈ ಮಾದರಿ ಕಾರ್ಯ ಎಲ್ಲರಿಗೂ ಸ್ಫೂರ್ತಿ ಆಗಲಿ’ ಎಂದು ಆಶಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಅರಂಭಿಸಿರುವ ಮಾಂಟೆಸ್ಸರಿ ತರಗತಿಗೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಬರೀ 30 ದಿನಗಳಲ್ಲಿ 32 ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಆಗಿದ್ದಾರೆ. ಆ ಮಕ್ಕಳು ಎಲ್ ಕೆಜಿ, ಯುಕೆಜಿ ನಂತರ ಅಲ್ಲಿಯೇ ಶಿಕ್ಷಣ ಮುಂದುವರೆಸುವುದರಿಂದ ಸರ್ಕಾರಿ ಶಾಲೆಯ ಬಲವರ್ಧನೆಗೂ ನೆರವಾಗಲಿದೆ ಎಂದರು.

Leave a Reply

Your email address will not be published. Required fields are marked *