ಸಮ್ಯಕ್ತ್ವ ಪಥವು ಸಾತ್ವಿಕವಾದುದು : ಹೊಂಬುಜ ಶ್ರೀಗಳು
ಶ್ರೀಕ್ಷೇತ್ರ ಹೊಂಬುಜದಲ್ಲಿ ಯಜ್ಞೋಪವೀತ ಧಾರಣೆ
ಹೊಂಬುಜ : ಜೈನ ಧರ್ಮದ ಸಿದ್ಧಾಂತಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮ್ಯಕ್ ಜ್ಞಾನ, ದರ್ಶನ, ಚಾರಿತ್ರ್ಯದ ನೈಜ ಪಥವು ಸಾತ್ವಿಕವೂ, ಆಪ್ತವೂ ಆಗಿ ಉತ್ತಮ ಪರಿಣಾಮವುಂಟಾಗುವುದು ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಉಪಕರ್ಮದ ಕುರಿತು ತಿಳಿಸಿದರು.
ಪ್ರಾತಃ ಕಾಲದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಶ್ರೀ ಜಿನೇಶ್ವರ ಬಿಂಬದ ಪೂಜೆ ನೆರವೇರಿಸಿ, ಶ್ರೀ ಮಠದ ಭಕ್ತರಿಗೆ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ರತ್ನತ್ರಯಧಾರಣೆಯ ಪ್ರತೀಕವಾದ ಜನಿವಾರ ಹಾಕಿ ಆಶೀರ್ವಾದ ಮಾಡಿದರು.
ಜೈನಾಗಮದ ಉಪದೇಶಗಳನ್ನು ನಿತ್ಯ ಪರಿಪಾಲಸಿ, ಆಹಾರ-ವಿಹಾರದಲ್ಲಿ ನಿಯಮಿತ ವ್ರತಧಾರಣೆ ಮಾಡುವುದರಿಂದ ಆರೋಗ್ಯವಂತರಾಗಿ, ಜ್ಞಾನವಂತರಾಗಿ ತಮ್ಮ ತಮ್ಮ ಕಾಯಕದಲ್ಲಿ ನಿಷ್ಠೆ ತೋರಿ ಯಶಸ್ವಿ ಜೀವನ ನಿರ್ವಹಿಸುವಂತರಾಗಿರಿ ಎಂದು ಶುಭಾಶೀರ್ವಾದ ಪ್ರವಚನದಲ್ಲಿ ಶ್ರೀಗಳವರು ತಿಳಿ ಹೇಳಿದರು.