ಗಾಂಜಾ ಕೇಸಲ್ಲಿ ಸಾಗರದ MESCOM ಇಂಜಿನಿಯರ್ ಅರೆಸ್ಟ್

ಗಾಂಜಾ ಕೇಸಲ್ಲಿ ಸಾಗರದ MESCOM ಇಂಜಿನಿಯರ್ ಅರೆಸ್ಟ್ | ಹೆಣ್ಣು ಕೊಡದ ಮಾವನನ್ನು ಗಾಂಜಾ ಕೇಸ್ ನಲ್ಲಿ ಸಿಕ್ಕಿಸಲು ಹೋಗಿ ತಾನೇ ತಗ್ಲಾಕೊಂಡ ಸ್ಟೋರಿ

ಮದುವೆ ವೈಷ್ಯಮ್ಯದ ಹಿನ್ನಲೆಯಲ್ಲಿ ಮನೆಯೊಂದರ ಕಾಂಪೌಂಡ್ ಒಳಗಡೆ ಗಾಂಜಾ ಎಸೆದು, ಹುಡುಗಿಯ ತಂದೆಯನ್ನು ಗಾಂಜಾ ಕೇಸಲ್ಲಿ ಸಿಕ್ಕಿ ಹಾಕಿಸಲು ಮಾಡಿದಂತ ಪ್ಲಾನ್ ಉಲ್ಟಾ ಆಗಿದೆ. ಈಗ ಯುವತಿಯ ಮನೆಯವರನ್ನು ಗಾಂಜಾ ಕೇಸಲ್ಲಿ ಸಿಕ್ಕಿ ಹಾಕಿಸಲು ಹೋಗಿ, ಮೆಸ್ಕಾಂ ಇಂಜಿನಿಯರ್ ತಾನೇ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿರುವಂತ ಘಟನೆ ಸಾಗರದಲ್ಲಿ ನಡೆದಿದೆ.

ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದ ಜತೇಂದ್ರ ರವರ ಮನೆಯ ಕಾಂಪೌಂಡ್ ಒಳಭಾಗದಲ್ಲಿ ದಿ:13-07-2024 ರಂದು ರಾತ್ರಿ ಸಮಯದಲ್ಲಿ ಯಾರೋ ಒಬ್ಬ ಅಸಾಮಿಯು ಗಾಂಜಾ ಪ್ಯಾಕೇಟ್ ಗಳನ್ನು ಹಾಕಿದ್ದು, ಈ ಕೃತ್ಯವನ್ನು ಶಾಂತಕುಮಾರ್ ಸ್ವಾಮಿ ಅವರು ಮಾಡಿರಬಹುದೆಂಬ ಅನುಮಾನ ಇರುವುದಾಗಿ ದೂರು ನೀಡಿರುತ್ತಾರೆ ಎಂದಿದೆ.

ಈ ದೂರಿನ ಮೇರೆಗೆ ದಿ: 16-07-2024 ರಂದು ಸಾಗರ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2024 ಕಲಂ 20(ಬಿ) (ii)(ಎ),8(ಸಿ) ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆ ಬಗ್ಗೆ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮಾರೆಡ್ಡಿ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅವರ ಮಾರ್ಗದರ್ಶದಲ್ಲಿ ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಿರುತ್ತಾರೆ.

ನಡೆದಿದ್ದೇನು..!!??

ದಿನಾಂಕ 13-07-2024ರಂದು ಕೆಳದಿ ರಸ್ತೆಯ ವಿದ್ಯಾನಗರ ಲೇಔಟ್ ನ ಹುಲ್ಲತ್ತಿಯಲ್ಲಿನ ಸಿವಿಲ್ ಇಂಜಿನಿಯರ್ ಜಿತೇಂದ್ರ ಎಂಬುವರು ಸಾಗರ ಪೊಲೀಸ್ ಠಾಣೆಗೆ ತೆರಳಿ ಈ ಮದುವೆ ವೈಮನಸ್ಸಿನಿಂದ ಗಾಂಜಾ ಕೇಸಲ್ಲಿ ತಗಲಾಕಿಸಲು ಪ್ಲಾನ್ ಮಾಡಿದ ದೂರು ನೀಡಿದ್ದಾರೆ. ಅದರಲ್ಲಿ ಮನೆಯ ಕಾಂಪೌಂಡ್ ಒಳಗಡೆ ಕಪ್ಪು ಕವರ್ ನಲ್ಲಿ ಗಾಂಜಾ ಕಟ್ಟಿ ರಾತ್ರಿ 10.46ರ ಸುಮಾರಿಗೆ ಎಸೆದು ಹೋಗಿದ್ದಾರೆ.

ಬೆಳಿಗ್ಗೆ ಇದನ್ನು ಗಮನಿಸಿದಂತ ಜಿತೇಂದ್ರ ಅವರು, ಗಾಂಜಾ ಎಂಬುದನ್ನು ಗುರುತಿಸಿ, ಮನೆಯಲ್ಲಿ ಅಳವಡಿಸಿದ್ದಂತ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಯಾರೋ ಗಾಂಜಾವನ್ನು ಎಸೆದು ಹೋಗಿರುವುದು ತಿಳಿದು ಬಂದಿದೆ. 

ಈ ಹಿನ್ನಲೆಯಲ್ಲಿ ದಿನಾಂಕ 10-07-2024ರಂದು ಬೆಳಿಗ್ಗೆ 12 ಗಂಟೆಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಮನೆಯ ಕಾಂಪೌಂಡ್ ಒಳಗಡೆ ಕವರಿನಲ್ಲಿ ಯಾರೋ ಆರೋಪಿಗಳು ಗಾಂಜಾ ಎಸೆದು ಹೋಗಿದ್ದಾರೆ ಅಂತ 15 ರಿಂದ 20 ಗ್ರಾಂ ತೂಕದ ಗಾಂಜಾವನ್ನು ಪೊಲೀಸರಿಗೆ ನೀಡಿದ್ದಾರೆ.

ಸೇಡು ತೀರಿಸಿಕೊಳ್ಳಲು ಕೃತ್ಯ :

ದೂರಿನಲ್ಲಿ ಈ ಹಿಂದೆ ಜಿತೇಂದ್ರ ಅವರ ಮಾವನ ಮಗಳು ಪಲ್ಲವಿ ಮತ್ತು ಶಾಂತ ಕುಮಾರ್ ಸ್ವಾಮಿ ಇಬ್ಬರ ಮದುವೆ ವಿಚಾರದಲ್ಲಿ ಹೊಂದಾಣಿಕೆ ಆಗದೇ ಮದುವೆ ಮುರಿದು ಬಿದ್ದಿತ್ತು. ಈ ದ್ವೇಷದಿಂಲೇ ಶಾಂತ ಕುಮಾರಸ್ವಾಮಿ ಗಾಂಜಾ ಕೇಸನ್ನು ಹಾಕುವ ಉದ್ದೇಶದಿಂದ ಯಾರೋ ವ್ಯಕ್ತಿಯನ್ನು ಕಳುಹಿಸಿ ನಮ್ಮ ಮನೆಯ ಕಾಂಪೌಂಡ್ ಒಳಗೆ ಗಾಂಜಾ ಪ್ಯಾಕೇಟ್ ಗಳನ್ನು ಎಸೆದಿರುವುದಾಗಿ ಆರೋಪಿಸಿದ್ದಾರೆ.

ಈ ದೂರು ಆಧರಿಸಿ ಸಾಗರ ಗ್ರಾಮ ಠಾಣೆಯ ಪೊಲೀಸರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ 1985ರ (U/s-20(b) (ii) A, 8(c) ಅಡಿಯಲ್ಲಿ ಪ್ರಕರಣ FIR ದಾಖಲಿಸಿಕೊಂಡಿದ್ದಾರೆ.

ಆ ವಿಶೇಷ ತಂಡದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ಎಸ್.ಎನ್‌, ಪಿಎಸ್‌ಐ ಸಿದ್ದರಾಮಪ್ಪ ಹೆಚ್ ಹಾಗೂ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸಿಹೆಚ್‌ 299 ಷೇಖ್ ಫೈರೋಜ್ ಅಹಮದ್ ಸಿಪಿಸಿ 1361 ರವಿಕುಮಾರ್, ಸಿಪಿಸಿ 1282 ಗುರುಬಸವರಾಜ್, ಜೀಪ್ ಚಾಲಕರಾದ ಎ.ಹೆಚ್.ಸಿ 124 ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ಸಿಬ್ಬಂಧಿಗಳಾದ ಗುರುರಾಜ, ಇಂದ್ರೇಶ್ ಮತ್ತು ವಿಜಯ್ ಕುಮಾರ್ ಈ ಪ್ರಕರಣದ ಜಾಡನ್ನು ಪತ್ತೆ ಹಚ್ಚಿರುತ್ತಾರೆ ಎಂದು ತಿಳಿಸಿದೆ.

ಈ ಪ್ರಕರಣದ ಪ್ರಮುಖ ಆರೋಪಿಯಾದ ಶಾಂತಕುಮಾರ್ ತಂದೆ ಲೇಟ್ ಗುರುಸ್ವಾಮಿ, 33 ವರ್ಷ, ಜಂಗಮ ಜಾತಿ, ಆನಂದಪುರ ಮೆಸ್ಕಾಂ ಇಲಾಖೆಯಲ್ಲಿ ಇಂಜಿನಿಯರ್ ವೃತ್ತಿ, ವಾಸ ಬೈರಾಪುರ ಗ್ರಾಮ, ಶಿಕಾರಿಪುರ ತಾಲ್ಲೂಕ್ ಹಾಗೂ ಸನಾವುಲ್ಲಾ @ ಸನಾ ತಂದೆ ದಾದೂಸಾಬ್, 48 ವರ್ಷ, ಲಗೇಜ್ ಆಟೋ ಚಾಲಕ, ವಾಸ ಅಣಲೆಕೊಪ್ಪ ಶಿರುವಾಳ ರಸ್ತೆ, ಸಾಗರ ಟೌನ್ ಅವರನ್ನು ದಿ: 26-07-2024 ರಂದು ವಶಕ್ಕೆ ಪಡೆದು ದಸ್ತಗಿರಿ ಮಾಡಿರುತ್ತದೆ ಎಂದು ಹೇಳಿದೆ.

ಎ.1 ಆರೋಪಿತನಾದ ಶಾಂತಕುಮಾರ್ ಮೇಲೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಸಿಆರ್ ನಂ 194/2023 ಕಲಂ 354,354(ಡಿ), 509, 465 ಐಪಿಸಿ, ಸಾಗರ ಪೇಟೆ ಠಾಣೆಯಲ್ಲಿ ಸಿಆರ್ ನಂ 110/2023 ಕಲಂ 323,354(ಬಿ),504,506 ಐಪಿಸಿ, ರೀತ್ಯಾ ದೂರು ದಾಖಲಾಗಿರುತ್ತದೆ ಎಂದು ತಿಳಿಸಿದೆ.

ಈ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಕೆಎ 18 ಎಂ 8303 ರ ಮಾರುತಿ 800 ಕಾರ್, ಒಂದು ವಿವೋ ಕಂಪನಿಯ ಮೊಬೈಲ್‌ ಫೋನ್, ಒಂದು ಪೆನ್ ಡ್ರೈವ್ ಅಮಾನತ್ತುಪಡಿಸಿಕೊಂಡು ಆರೋಪಿತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ ಎಂದಿದ್ದಾರೆ. ಈ ಮೂಲಕ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅವರು ಜೈಲುಪಾಲಾಗಿದ್ದಾರೆ.

Leave a Reply

Your email address will not be published. Required fields are marked *