ಸಿಗಂದೂರು ಸೇತುವೆ ಉದ್ಘಾಟನೆ – ಬಿಜೆಪಿ ಪಕ್ಷದ ಕಾರ್ಯಕ್ರಮ , ನನಗೆ ಆಹ್ವಾನ ನೀಡಿಲ್ಲ – ಬೇಳೂರು ಗೋಪಾಲಕೃಷ್ಣ
ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಈ ಸೇತುವೆಯ ಉದ್ಘಾಟನೆ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಅವರು ಆಗ್ರಹಿಸಿದ್ದು, ತಮಗೆ ಈವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ಸೇತುವೆ ಆ ಭಾಗದ ಜನರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಆದರೆ ಬಿಜೆಪಿಯವರು ಈ ಲೋಕಾರ್ಪಣೆ ಕಾರ್ಯಕ್ರಮವನ್ನು ತಮ್ಮ ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆ. ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಇಲ್ಲಿಯವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ. ಸಂಸದ ಬಿವೈ ರಾಘವೇಂದ್ರ ಅವರು ಪ್ರತಿದಿನ ಬಂದು ಪೆಂಡಾಲ್ ಹಾಗೂ ಸೇತುವೆಯನ್ನು ಪರಿಶೀಲಿಸಿ ಹೋಗುತ್ತಾರೆ, ಆದರೂ ನನಗೆ ಆಹ್ವಾನ ಪತ್ರಿಕೆ ಕೊಟ್ಟಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ನಿತಿನ್ ಗಡ್ಕರಿ ಹಾಗೂ ಯಡಿಯೂರಪ್ಪ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ನಾವೇನು ರಾಜಕಾರಣ ಮಾಡುವುದಿಲ್ಲ. ನಾನು ಸೇತುವೆ ಉದ್ಘಾಟನೆಗೆ ಹೋಗುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಒತ್ತಿ ಹೇಳಿದರು. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರಿಗೂ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ತಿಳಿದುಬಂದಿದೆ ಎಂದೂ ಅವರು ತಿಳಿಸಿದರು.
ಸೇತುವೆಯ ನಾಮಕರಣದ ಕುರಿತು ಮಾತನಾಡಿದ ಬೇಳೂರು ಗೋಪಾಲಕೃಷ್ಣ, “ಸೇತುವೆಗೆ ಸಿಗಂದೂರು ದೇವಿ ಹೆಸರನ್ನೇ ಇಡಬೇಕು. ಬೇರೆ ಹೆಸರಿಡಲು ಪ್ರಯತ್ನಿಸಿದರೆ ಅಲ್ಲಿ ಬೋರ್ಡ್ ಹಾಕಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಅವರೇ ದೇವಸ್ಥಾನದಲ್ಲಿ ದೇವಿ ಹೆಸರಿಡಬೇಕು ಎಂದು ಹೇಳಿದ್ದರಿಂದ, ಅದೇ ಹೆಸರನ್ನೇ ಇಡಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ಹಾಲಪ್ಪ ಕುರಿತು ತೀವ್ರ ವಾಗ್ದಾಳಿ ನಡೆಸಿದ ಗೋಪಾಲಕೃಷ್ಣ ಶರಾವತಿ ಹಿನ್ನೀರಿನಲ್ಲಿ ಹಾಲಪ್ಪ ಅವರ ಕಡೆಯವರು ಯಾರೂ ಮುಳುಗಿಲ್ಲ. ಹಾಲಪ್ಪ ಬರೀ ಬೊಗಳೆ ಬಿಡುತ್ತಾರೆ. ಅವರ ಕುಟುಂಬದವರು ಯಾರೂ ಅಲ್ಲಿ ಮುಳುಗಡೆ ಆಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. “ನಾನು ಎಂ.ಎಲ್.ಎ. ಆಗಿದ್ದಾಗಲೇ ಯಡಿಯೂರಪ್ಪ ಸಿಎಂ ಆಗಿದ್ದಾಗ ನನ್ನ ಪತ್ರದ ಮೇಲೆಯೇ 100 ಕೋಟಿ ರೂ. ಅನುದಾನ ಕೊಟ್ಟಿದ್ದರು. ಆಗ ಹಾಲಪ್ಪ ಹಾಗೂ ಇದೇ ರಾಘವೇಂದ್ರ ಅವರು ಸಿಗಂದೂರು ಸೇತುವೆ ಆಗಬೇಕು ಎಂದು ಹಸಿರುಮಕ್ಕಿ ಸೇತುವೆ ಕಾಮಗಾರಿ ನಿಲ್ಲಿಸಿದ್ದರು” ಎಂದು ಗಂಭೀರ ಆರೋಪ ಮಾಡಿದರು. ಸೇತುವೆ ನಿರ್ಮಾಣವು ಯಡಿಯೂರಪ್ಪ ಅವರ ಕಲ್ಪನೆಯಾಗಿತ್ತು ಎಂದೂ ಅವರು ಸ್ಪಷ್ಟಪಡಿಸಿದರು.
ಸೇತುವೆ ನಿರ್ಮಾಣದಿಂದ ಸ್ಥಳೀಯ ಜನರಿಗೆ ಬಹಳ ಉಪಯೋಗವಾಗಿದ್ದು, ಈ ಹಿಂದೆ ಓಡಾಡಲು ತುಂಬಾ ತೊಂದರೆ ಇತ್ತು, ಈಗ ಬಹಳ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, “ನಾವು ಕೂಡ ಹಸಿರುಮಕ್ಕಿ ಸೇತುವೆ ಉದ್ಘಾಟನೆಗೆ ಸಿಎಂ, ಡಿಸಿಎಂ ಅವರನ್ನೂ ಕರೆಸಿ ರಾಜಕಾರಣ ಮಾಡುತ್ತೇವೆ ಎಂದರು.
ದೇಶದ ಸಂಪನ್ಮೂಲ ಕೆಲವರಲ್ಲಿದೆ ಎಂಬ ಕಾಳಜಿ ಇರುವ ಸಚಿವ ನಿತಿನ್ ಗಡ್ಕರಿ ಅವರು ಮುಂದಿನ ಪ್ರಧಾನಿ ಆಗಬೇಕು. ಆರ್ ಎಸ್ ಎಸ್ ನ ಸರಸಂಚಾಲಕ ಮೋಹನ್ ಭಾಗವತ್ ಅವರು 75 ವರ್ಷ ಆದ ಶಾಸಕರು, ಸಚಿವರಿಗೆ ಸ್ಥಾನಬಿಟ್ಟುಕೊಡಿ ಎಂದಿದ್ದಾರೆ. ಮೋದಿ ಅವರಿಗೂ 75 ವರ್ಷ ಆಗಿದೆ ಅವರ ಬಗ್ಗೆ ಚಕಾರ ಎತ್ತುತ್ತಿಲ್ಲ ಯಾಕೆ? ಬಿಎಸ್ ವೈಗೆ ಕಣ್ಣೀರು ಹಾಕಿಸಿದ್ರಲ್ಲ ಎಂದು ಪ್ರಶ್ನಿಸಿದ ಅವರು ಹಾಗಾಗಿ ಮೋದಿ ಅವರನ್ನ ಅವರು ಇಳಿಸುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟಿದ್ದು. ಅವರ ನಂತರ ಪ್ರಧಾನಿ ರೇಸ್ ನಲ್ಲಿ ಗಡ್ಕರಿ ಇದ್ದಾರೆ ಎಂದರು.