ಸಿಗಂದೂರು ಸೇತುವೆಗೆ ಯಡಿಯೂರಪ್ಪ ಹೆಸರಿಡುವಂತೆ ವೀರಶೈವ ಮಹಾಸಭಾ ವತಿಯಿಂದ ಒತ್ತಾಯ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡುವಂತೆ ಹೊಸನಗರ ತಾಲೂಕ್ ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷರಾದ ಉಮೇಶ್ ಮಸರೂರು ಆಗ್ರಹಿಸಿದ್ದಾರೆ.
ಪಟ್ಟಣದ ಶಿವಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಜಿಲ್ಲೆಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಬಿಎಸ್ವೈ ಅವರು ಒಂದು ವರ್ಗಕ್ಕೆ ಸೀಮಿತ ರಾಜಕಾರಣ ಮಾಡದೆ, ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲಾ ವರ್ಗಗಳನ್ನು ಸಮಾನವಾಗಿ ಕಂಡಿದ್ದಾರೆ. ಈ ಕಾರಣಕ್ಕೆ ಅವರ ಪರಿಶ್ರಮದಿಂದ ಅಂಬಾರಗೋಡ್ಲು – ಕಳಸವಳ್ಳಿ ಸಿಗಂದೂರು ಶರಾವತಿ ನದಿಯ ಮೇಲ್ಸೆತುವೆ ತ್ವರಿತ ಗತಿಯಲ್ಲಿ ನಿರ್ಮಾಣವಾಗಿದೆ.ಸದರಿ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಈ ಸೇತುವೆಗೆ ಬಿಎಸ್ ವೈ ಹೆಸರು ಪರಿಗಣಿಸಿ ನಾಮಕರಣ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ಉಪತಹಸಿಲ್ದಾರ್ ಮೂಲಕ ಹೊಸನಗರ ತಾಲೂಕ್ ಅಖಿಲ ಭಾರತೀಯ ವೀರಶೈವ ಮಹಾಸಭಾ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಾಂತಪ್ಪ, ಕರುಣೇಶ್ವರ,ನೀಲಾ ಶಂಕರ್,ಹೆಚ್ ಆರ್ ತೀರ್ಥೇಶ್, ರಾಜಶೇಖರ್ ಕೆಎನ್, ಬಿ ಎಲ್ ಲಿಂಗಪ್ಪ ಗೌಡ,ಬಸವರಾಜ ದೊಂಬೆಕುಪ್ಪ, ಜಂಬಳ್ಳಿ ಸದಾನಂದ, ವಸಂತಮ್ಮ, ಯಶೋದಮ್ಮ, ಲೋಕೇಶ್,ವಾಣಿ ಪ್ರಕಾಶ್, ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.