ಗಾಂಜಾ ಮಾರುತ್ತಿದ್ದ ಯುವಕನ ಬಂಧನ
ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ತ್ಯಾವರೆಚಟ್ನಳ್ಳಿಯ ಹೊನ್ನಾಳ್ಳಿ ರಸ್ತೆಗೆ ಹೊಂದಿಕೊಂಡಂತಿರುವ ಲೇಕ್ ವ್ಯೂ ರೆಸಿಡೆನ್ಸಿ ಸಮೀಪ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದ ಟಿಪ್ಪುನಗರ 4 ನೇ ಕ್ರಾಸ್ ನಿವಾಸಿ, ಚಾಲಕ ವೃತ್ತಿ ಮಾಡುವ ಮೊಹಮ್ಮದ್ ಜಮೀರ್ ಅಹಮದ್ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಜು. 1 ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯಿಂದ 25 ಸಾವಿರ ರೂ. ಮೌಲ್ಯದ ಒಣ ಗಾಂಜಾ ಹಾಗೂ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಇಎನ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಪಿಕಪ್ ಹಾಗೂ ಬೈಕ್ ನಡುವೆ ಅಪಘಾತ – ಓರ್ವ ಗಂಭೀರ

ಸಾಗರ : ತಾಲೂಕಿನ ಆನಂದಪುರ ಸಮೀಪದ ಮುಂಬಾಳು ಬಳಿ ಬೈಕ್ ಹಾಗೂ ಅಶೋಕ್ ಲೇಲ್ಯಾಂಡ್ ವಾಹನದ ನಡುವೆ ಅಪಘಾತ ಸಂಭವಿಸಿದೆ.
ಸಾಗರದಿಂದ ಶಿವಮೊಗ್ಗದ ಕಡೆ ತೆರಳುತ್ತಿದ್ದ ಹೀರೋ ಬೈಕ್ ಹಾಗೂ ಆನಂದಪುರದಿಂದ ಕಾರ್ಗಲ್ ಕಡೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಗಾಡಿಕೊಪ್ಪ ನಿವಾಸಿ ಗಣೇಶ್ ಎಂಬವರಿಗೆ ತೀವ್ರ ಪ್ರಮಾಣದ ಗಾಯವಾಗಿದೆ. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಹಾಗೂ 112 ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.