ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ

ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ

ತೀರ್ಥಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಥ್ ಗೌಡ ಅವರು ಪತ್ರಕರ್ತರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತೀರ್ಥಹಳ್ಳಿಯ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ನಿರಂಜನ್ ರಥಬೀದಿಯಲ್ಲಿ ವರದಿಗಾಗಿ ತೆರಳಿದ ಸಂದರ್ಭ ವಿಡಿಯೊ ಚಿತ್ರೀಕರಿಸುವಾಗ ಅಶ್ವಥ್ ಗೌಡ ಸಿಬ್ಬಂದಿಗೆ ಸೂಚನೆ ನೀಡಿ ಬಲವಂತವಾಗಿ ಮೊಬೈಲ್ ಫೋನ್‌ ಕಿತ್ತುಕೊಂಡು ಠಾಣೆಗೆ ಹೋಗಿದ್ದಾರೆ. ಮೊಬೈಲ್ ಫೋನ್‌ ಪಡೆಯಲು ಠಾಣೆಗೆ ಹೋದಾಗ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ ಇತರ ಪತ್ರಕರ್ತರ ಜೊತೆಗೂ ದರ್ಪದಿಂದ ವರ್ತಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ತೀರ್ಥಹಳ್ಳಿ ಠಾಣೆಯಲ್ಲಿ ಅಳವಡಿಸಲಾದ ಸಿ.ಸಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ವರದಿ ನೀಡುವಂತೆ ಡಿವೈಎಸ್‌ಪಿಗೆ ಸೂಚಿಸಿದ್ದೇನೆ. ನಂತರ ಸತ್ಯಾಸತ್ಯತೆ ಅಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಿಥುನ್‌ಕುಮಾರ್ ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪತ್ರಕರ್ತರಾದ ಎನ್. ರವಿಕುಮಾರ್, ವಿ.ಟಿ.ಅರುಣ್, ನಾಗರಾಜ ನೇರಿಗೆ, ಜೇಸುದಾಸ್‌, ರವಿಕುಮಾರ್ ಟೆಲೆಕ್ಸ್‌, ಚಂದ್ರಶೇಖರ ಶೃಂಗೇರಿ, ವೈದ್ಯನಾಥ, ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್‌, ಅಶ್ವಿನಿ ನಾಯಕ್, ಶಿವಾನಂದ ಕರ್ಕಿ, ಹುಚ್ಚರಾಯಪ್ಪ ಈ ವೇಳೆ ಹಾಜರಿದ್ದರು.

Leave a Reply

Your email address will not be published. Required fields are marked *