ಸರ್ಕಾರಿ ಶಾಲೆಯ ಬಿಸಿಯೂಟ ಕೊಠಡಿಯಲ್ಲಿ ಅವಿತು ಕುಳಿತ ಕಾಳಿಂಗ ಸರ್ಪ | ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಸರ್ಕಾರಿ ಶಾಲೆಯ ಬಿಸಿಯೂಟ ಕೊಠಡಿಯಲ್ಲಿ ಅವಿತು ಕುಳಿತ ಕಾಳಿಂಗ ಸರ್ಪ | ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ ಸರ್ಪವನ್ನು ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದ ಉರಗ ತಜ್ಞ ಅಜಯಗಿರಿ ಸುರಕ್ಷಿತವಾಗಿ  ಸೆರೆ ಹಿಡಿದು ಅರಣ್ಯ ಕ್ಕೆ ಬಿಟ್ಟಿರುವ ಘಟನೆ ನಡೆದಿದೆ.

ಮತ್ತಿಕೈ ಗ್ರಾಮದಲ್ಲಿರು ಸರ್ಕಾರಿ ಶಾಲೆಯಲ್ಲಿ ಸೋಮವಾರ ಬೆಳಿಗ್ಗೆ ಅಡುಗೆ ಸಹಾಯಕಿ ಅಕ್ಕಿ ಬೇಳೆಗಾಗಿ ಬಿಸಿಯೂಟ ದಾಸ್ತಾನು ಕೊಠಡಿಯ ಬಾಗಿಲು ತೆರೆದಾಗ ಬೃಹತ್ ಕಾಳಿಂಗ ಸರ್ಪ  ಕಾಣಿಸಿಕೊಂಡಿದೆ.ಕೂಡಲೇ ಮುಖ್ಯ ಶಿಕ್ಷಕರಿಗೆ ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

ಸೋಮವಾರವಾಗಿದ್ದರಿಂದ ಮಕ್ಕಳು ಕೂಡ ಶಾಲೆಗೆ ಆಗಮಿಸಿದ್ದರು, ಬೋಧನಾ ಕೊಠಡಿ ಹಾಗೂ ಬಿಸಿಯೂಟ ಕೊಠಡಿ ನಡುವೆ ಬಹಳಷ್ಟು ಅಂತರವಿರುವ ಕಾರಣ ಮಕ್ಕಳು ಅದೃಷ್ಟವಶಾತ್ ಬಿಸಿಯೂಟದ ಕೊಠಡಿಯ ಹತ್ತಿರ ಸುಳಿದಿರಲಿಲ್ಲ.

ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಯ ಮುಖ್ಯಶಿಕ್ಷಕ ಸುಪ್ರಿತ್ ಡಿಸೋಜ ಕೊಠಡಿಯ ಬಾಗಿಲನ್ನು ಮುಚ್ಚಿ ಹಾವು ಶಾಲಾ ಆವರಣದತ್ತ ಬಾರದಂತೆ ಕೂಡಿಹಾಕಿ ಸ್ಥಳೀಯ ಅರಣ್ಯ ಇಲಾಖೆಯ ಮೂಲಕ ಅಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಅಜಯಗಿರಿ ರವರನ್ನು ಸಂಪರ್ಕಿಸಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಜಯ್ ಗಿರಿ ಹಾಗೂ ತಂಡದವರು ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ನಂತರ ಮಕ್ಕಳು ಮತ್ತು ಪೋಷಕರಿಗೆ ಕಾಳಿಂಗ ಸರ್ಪ ಕಂಡುಬಂದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡರ್ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *