ಹರ್ಷ ಹತ್ಯೆ ಪ್ರಕರಣ : ಪ್ರಚೋದನಕಾರಿ ಹೇಳಿಕೆ ಆರೋಪ, ಸಚಿವ ಈಶ್ವರಪ್ಪ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

 ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಚಿವ ಈಶ್ವರಪ್ಪ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿದೆ.

ಶಿವಮೊಗ್ಗದಲ್ಲಿ ಕಳೆದ ತಿಂಗಳ 20ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಈ ಸಂಬಂಧ ಪ್ರಚೋದನಕಾರಿ, ಸಾರ್ವಜನಿಕ ಹೇಳಿಕೆ ನೀಡಿ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ವೈರತ್ವ ಉಂಟಾಗುವಂತೆ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಬಿಜೆಪಿ ಮುಖಂಡ ಚನ್ನಬಸಪ್ಪ ವಿರುದ್ಧ ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಶಿವಮೊಗ್ಗದ ಇಲಿಯಾಸ್‌ ನಗರದ ನ್ಯೂ ಮಂಡಲಿ ರಸ್ತೆಯ ‘ಶಾಂತಿ ಸಂಘಟನೆ’ ಮುಖಂಡ ರಿಯಾಜ್‌ ಅಹಮದ್ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆ ನಡೆಸಿದ, ‘ಕರ್ನಾಟಕದ ಹಾಲಿ-ಮಾಜಿ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್‌ ಕೋರ್ಟ್‌’ ನ್ಯಾಯಾಧೀಶೆ ಪ್ರೀತ್‌ ಜೆ ಅವರು, ಈ ಕುರಿತಂತೆ ತನಿಖೆ ನಡೆಸಲು ನಿರ್ದೇಶಿಸಿದ್ದಾರೆ.

ದೂರುದಾರರು ಪ್ರಕರಣವನ್ನು ತನಿಖೆಗೆ ಉಲ್ಲೇಖಿಸಲು ಕಾರಣವನ್ನು ಹೊಂದಿದ್ದಾರೆ ಎಂದು ಪರಿಗಣಿಸಿದ ಬೆಂಗಳೂರಿನ ನ್ಯಾಯಾಲಯವು ಶಿವಮೊಗ್ಗದ ಪೊಲೀಸರಿಗೆ ಅದೇ ನಿರ್ದೇಶನವನ್ನು ನೀಡಿದೆ. ‘ರಿಯಾಜ್‌ ಅಹಮದ್‌ ಅವರ ದೂರನ್ನು ಸಿಆರ್‌ಪಿಸಿ ಕಲಂ 156 (3)ರ ಅಡಿಯಲ್ಲಿ ದಾಖಲಿಸಿಕೊಂಡು ಆರೋಪಿಗಳಾದ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹಾಗೂ ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಚನ್ನಬಸಪ್ಪ (ಚನ್ನಿ) ವಿರುದ್ಧ ಸೂಕ್ತ ತನಿಖೆ ನಡೆಸಿ’ ಎಂದು ಶಿವಮೊಗ್ಗ ದೊಡ್ಡಪೇಟೆಯ ಪೊಲೀಸ್ ಠಾಣೆ ಅಧಿಕಾರಿಗೆ ನಿರ್ದೇಶಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದ್ದಾರೆ.

ದೂರುದಾರ ರಿಯಾಜ್‌ ಸಲ್ಲಿಸಿರುವ ದೂರಿನಲ್ಲಿರುವಂತೆ, ‘ಭಜರಂಗದಳದ ಕಾರ್ಯಕರ್ತ ಹರ್ಷ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2022ರ ಫೆಬ್ರುವರಿ 20ರಂದು ರಾತ್ರಿ 9 ಗಂಟೆ ವೇಳೆಯಲ್ಲಿ ಹತ್ಯೆಗೀಡಾಗಿದ್ದರು.

 ಈ ಕುರಿತಂತೆ ದೊಡ್ಡಪೇಟೆ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಹತ್ಯೆ ನಡೆದ ಮರುದಿನ ಶವಯಾತ್ರೆ ವೇಳೆ ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ಮತ್ತು ಚನ್ನಬಸಪ್ಪ ಅವರು ಪ್ರಕರಣಕ್ಕೆ ರಾಜಕೀಯ ಮತ್ತು ಧಾರ್ಮಿಕ ಲೇಪನ ಮಾಡಿ ಹಿಂದೂ ಮುಸ್ಲಿಂ ಸಮುದಾಯಗಳ ನಡುವಿನ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ನಾನು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಲು ಹೋದರೂ ಠಾಣಾಧಿಕಾರಿ ದೂರು ದಾಖಲಿಸಿಕೊಳ್ಳಲಿಲ್ಲ. ಈ ಸಂಬಂಧ ನಾನು ಮೇಲಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ, ನ್ಯಾಯಕ್ಕಾಗಿ ಈ ಕೋರ್ಟಿನ ಮೊರೆ ಹೊಕ್ಕಿದ್ದೇನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *