ಹಲಾಲ್ ಮಾಂಸ ಮಾರಾಟಗಾರನ ಮೇಲೆ ಬಜರಂಗದಳದ ಸದಸ್ಯರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟು ದಿನಕಳೆದಂತೆ ಹೆಚ್ಚಾಗುತ್ತಿದೆ.
ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಭಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ವಿವಾದಗಳು ಒಂದಾದ ಮೇಲೊಂದರಂತೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿವೆ. ಇದರ ಬೆನ್ನಲ್ಲೆ ಹಲಾಲ್ ಮಾಂಸ ಮಾರಾಟಗಾರನ ಮೇಲೆ ಹಲ್ಲೆ ಮಾಡಿರುವುದು ಹಿಂಸಾಚಾರವನ್ನು ಭುಗಿಲೇಳಲಿದೆ. ಇದಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಹೀಗಾಗಿ ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟು ಪರಿಹರಿಸುವಂತೆ ಸಿಎಂ ಬೊಮ್ಮಾಮಿ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ.
ಮೊನ್ನೆಯಷ್ಟೇ ‘ಹಲಾಲ್’ ಮಾಂಸದ ವಿರುದ್ಧ ಬಂದಿರುವ ‘ಗಂಭೀರ ಆಕ್ಷೇಪ’ ವನ್ನು ತಮ್ಮ ಸರ್ಕಾರ ಪರಿಶೀಲಿಸಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ಕೆಲವು ಬಜರಂಗದಳ ಕಾರ್ಯಕರ್ತರು ಗುರುವಾರ ಭದ್ರಾವತಿಯಲ್ಲಿ ಮುಸ್ಲಿಂ ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿಎಂ ಲಕ್ಷ್ಮಿ ಪ್ರಸಾದ್ ಎಎನ್‌ಐಗೆ ತಿಳಿಸಿದ್ದಾರೆ.
“ಭಜರಂಗದಳದ ಕಾರ್ಯಕರ್ತರು ವಿನಾಕಾರಣ ವಾಗ್ವಾದ ನಡೆಸಿ ಮುಸ್ಲಿಂ ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ” ಎಂದು ಶಿವಮೊಗ್ಗ ಎಸ್ಪಿ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಬಜರಂಗದಳದ ಕೆಲ ಕಾರ್ಯಕರ್ತರು ಹೊಸಮನೆ ಪ್ರದೇಶದಲ್ಲಿ ‘ಹಲಾಲ್’ ಮಾಂಸದ ವಿರುದ್ಧ ಪ್ರಚಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಅವರು ಮುಸ್ಲಿಂ ಮಾಂಸ ಮಾರಾಟಗಾರ ತೌಸಿಫ್‌ಗೆ ಬೆದರಿಕೆ ಹಾಕಿದ್ದರು.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಕಾರ್ಯಕರ್ತರು ಅವರ ಕೋಳಿ ಅಂಗಡಿಯಲ್ಲಿ ‘ಹಲಾಲ್ ಅಲ್ಲದ’ ಮಾಂಸವನ್ನು ಮಾರಾಟ ಮಾಡಲು ಕೇಳಿದರು. ಅಂತಹ ಮಾಂಸವು ಸಿದ್ಧವಾಗಿಲ್ಲ ಮತ್ತು ಅವರು ಅದನ್ನು ವ್ಯವಸ್ಥೆಗೊಳಿಸುವುದಾಗಿ ಹೇಳಿದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಥಳಿಸಿದ್ದಾರೆ ಎನ್ನಲಾಗಿದೆ. ದೂರಿನ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಐವರು ಬಲಪಂಥೀಯ ಕಾರ್ಯಕರ್ತರನ್ನು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಮು ಸೂಕ್ಷ್ಮ ಶಿವಮೊಗ್ಗ ಜಿಲ್ಲೆಯ ಮತ್ತೊಂದು ಘಟನೆಯಲ್ಲಿ, ಹಳೇ ಭದ್ರಾವತಿಯಲ್ಲಿ ಹಲಾಲ್ ಅಲ್ಲದ ಮಾಂಸವನ್ನು ನೀಡದಿದ್ದಕ್ಕಾಗಿ ಇದೇ ಭಜರಂಗದಳದ ಕಾರ್ಯಕರ್ತರ ವಿರುದ್ಧ ಪೊಲೀಸರು ಬೆದರಿಕೆ ಮತ್ತು ನಿಂದನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹೋಟೆಲ್ ಮಾಲೀಕರನ್ನು ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
‘ಹಲಾಲ್’ ಮಾಂಸದ ವಿರುದ್ಧ ಗಂಭೀರ ಆಕ್ಷೇಪಗಳು ವ್ಯಕ್ತವಾಗಿರುವುದರಿಂದ ರಾಜ್ಯ ಸರ್ಕಾರವು ಪರಿಶೀಲಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಬುಧವಾರ ಹೇಳಿದರು.
“ಹಲಾಲ್ ಸಮಸ್ಯೆ ದೊಡ್ಡದಾಗಿ ಬೆಳೆಸಲಾಗುತ್ತಿದೆ. ನಾವು ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕೆಲ ಹಾಕುತ್ತೇನೆ. ಹಲಾಲ್ ಮಾಂಸದ ಬಗ್ಗೆ ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿವೆ. ನಾನು ಅದನ್ನು ಪರಿಶೀಲಿಸುತ್ತೇನೆ” ಎಂದು ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೆಲವು ಬಲಪಂಥೀಯ ಸಂಘಟನೆಗಳು ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಕರೆ ಕುರಿತು ಕೇಳಿದಾಗ ಬೊಮ್ಮಾಯಿ, “ನನ್ನ ಸರ್ಕಾರಕ್ಕೆ ಸಂಬಂಧಿಸಿದಂತೆ, ನಾವು ಬಲಪಂಥೀಯ ಅಥವಾ ಎಡಪಂಥೀಯರಲ್ಲ, ಕೇವಲ ಬೆಳವಣಿಗೆಯ ಪಂಥ” ಎಂದು ಹೇಳಿದರು.
ಮಾಹಿತಿ ಕೃಪೆ : ಒನ್ ಇಂಡಿಯಾ