ವಿಡಿಯೋ ವೈರಲ್ ಬೆದರಿಕೆ, ನಿರಂತರ ಅತ್ಯಾಚಾರ ಆರೋಪ: 3 ತಿಂಗಳ ಗರ್ಭಿಣಿಯಾದ ಯುವತಿ – 57 ವರ್ಷದ ವ್ಯಕ್ತಿ ವಿರುದ್ಧ ದೂರು | A 22-year-old woman in Shivamogga has accused a 57-year-old man of repeated sexual assault, blackmail using a video, caste abuse and threats. She alleges she is three months pregnant.
ಶಿವಮೊಗ್ಗ: ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಹಲವು ವರ್ಷಗಳಿಂದ ಯುವತಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಯುವತಿ ಮೂರು ತಿಂಗಳ ಗರ್ಭಿಣಿಯಾಗಿದ್ದು, 57 ವರ್ಷದ ವ್ಯಕ್ತಿಯ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚಿಕ್ಕಮಳಲಿ ಗ್ರಾಮದ 57 ವರ್ಷದ ವ್ಯಕ್ತಿಯ ವಿರುದ್ಧ 22 ವರ್ಷದ ಯುವತಿ ದೂರು ನೀಡಿದ್ದಾರೆ. ಯುವತಿಯ ತಂದೆ-ತಾಯಿ ಆರೋಪಿಯ ತೋಟ ಹಾಗೂ ಫಾರಂ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಯುವತಿ ಕೆಲಸದ ನಿಮಿತ್ತ ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ಭುವನ್ ಇಂಡಸ್ಟ್ರಿಗೆ ಬಂದಿದ್ದ ಸಂದರ್ಭದಲ್ಲಿ, ಒಂದರಿಂದ ಎರಡು ವರ್ಷಗಳ ಹಿಂದೆ ಕಚೇರಿಯ ಪಕ್ಕದ ಕೋಣೆಗೆ ಕರೆದೊಯ್ದು ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದ ಆರೋಪಿ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಯುವತಿಯ ತಂದೆ-ತಾಯಿಯನ್ನು ಕೆಲಸದಿಂದ ತೆಗೆದುಹಾಕಿ ಕುಟುಂಬವನ್ನು ಬೀದಿಗೆ ತಳ್ಳುವುದಾಗಿ ಹಾಗೂ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರೆಸಾರ್ಟ್‌ಗೆ ಕರೆದೊಯ್ದು ಅತ್ಯಾಚಾರ ಆರೋಪ
2026ರ ಆಗಸ್ಟ್ 27ರಂದು ಯುವತಿಗೆ ಬೆದರಿಕೆ ಹಾಕಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಲ್ನಾಡ್ ರೆಸಾರ್ಟ್‌ಗೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಮಧ್ಯರಾತ್ರಿ ಸುಮಾರು 12ರಿಂದ 12.30ರ ವೇಳೆಗೆ ಮತ್ತೆ ಶಿವಮೊಗ್ಗದ ಭುವನ್ ಇಂಡಸ್ಟ್ರಿಗೆ ಕರೆದೊಯ್ದು ಬಲವಂತವಾಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಸದ್ಯ ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ತನ್ನ ಗರ್ಭಧಾರಣೆಗೆ ಆರೋಪಿಯೇ ಕಾರಣ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಗರ್ಭಪಾತದ ಔಷಧಿಗಳನ್ನು ತಂದು ಸೇವಿಸುವಂತೆ ಒತ್ತಡ ಹೇರಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ತನ್ನ ಮೇಲೆ ಅತ್ಯಾಚಾರ ಎಸಗಿರುವುದು, ಜಾತಿ ನಿಂದನೆ ಮಾಡಿರುವುದು ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಪೊಲೀಸರಿಗೆ ಗಣಕೀಕೃತ ದೂರು ಸಲ್ಲಿಸಿದ್ದಾರೆ.
ಈ ಸಂಬಂಧದ ಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣ ಶಿವಮೊಗ್ಗದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ದಾಖಲಾಗಿದೆ ಎನ್ನಲಾಗಿದೆ. ಪ್ರಕರಣ ದಾಖಲಾಗಿ 11 ದಿನ ಕಳೆದಿದ್ದರೂ ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ನೊಂದ ಯುವತಿ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸ್ ಇಲಾಖೆಯಿಂದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಬೇಕಿದೆ.
