HOSANAGARA | ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಬಾರ್ ಮಾಲೀಕನಿಗೆ ಮಚ್ಚು ತೋರಿಸಿ ಬೆದರಿಕೆ – ಮೂವರು ಆರೋಪಿಗಳ ಬಂಧನ! | Three persons arrested for allegedly threatening a bar and restaurant owner with a machete following an argument over cigarettes near Bidanur Nagar in Hosanagara taluk, Shivamogga district.
ಹೊಸನಗರ: ಊಟ ಮಾಡಿದ ಬಳಿಕ ಸಿಗರೇಟ್ ಕೇಳಿದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಮಚ್ಚು ತೋರಿಸಿ ಬೆದರಿಕೆ ಹಾಕುವ ಹಂತಕ್ಕೆ ತಲುಪಿದ ಘಟನೆ ಹೊಸನಗರ ತಾಲೂಕಿನ ಬಿದನೂರು ನಗರ ಸಮೀಪದ ನೂಲಿಗೇರಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ನೂಲಿಗೇರಿ ಬಾರ್ ಅಂಡ್ ರೆಸ್ಟೋರೆಂಟ್ಗೆ ಬಂದಿದ್ದ ಆರೋಪಿಗಳು ಊಟ ಮಾಡಿದ ಬಳಿಕ ಸಿಗರೇಟ್ ನೀಡುವಂತೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಮಾಲೀಕ ಆದಿರಾಜ್ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ವಾಗ್ವಾದ ತೀವ್ರಗೊಂಡ ವೇಳೆ ಆರೋಪಿಗಳಲ್ಲಿ ಒಬ್ಬಾತ ರೆಸ್ಟೋರೆಂಟ್ನಿಂದ ಹೊರಗೆ ತೆರಳಿ ಮಚ್ಚು ತಂದು ಮಾಲೀಕ ಆದಿರಾಜ್ ಅವರಿಗೆ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ರೆಸ್ಟೋರೆಂಟ್ ಮಾಲೀಕ ಆದಿರಾಜ್ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ನಗರ ಠಾಣೆಯ ಪಿಎಸ್ಐ ಶಿವಾನಂದ ಕೋಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
